ADVERTISEMENT

ಹುಟ್ಟೂರು ಬಂಟ್ವಾಳದ ಕಾರಿಂಜದಲ್ಲಿ ಸುಹಾಸ್‌ ಶೆಟ್ಟಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 22:55 IST
Last Updated 2 ಮೇ 2025, 22:55 IST
   

ಮಂಗಳೂರು: ಬಜಪೆಯ ಕಿನ್ನಿಪದವಿನಲ್ಲಿ ಗುರುವಾರ ರಾತ್ರಿ ಹತ್ಯೆಗೀಡಾದ ಹಿಂದುತ್ವವಾದಿ ಕಾರ್ಯಕರ್ತ, ರೌಡಿ ಶೀಟರ್‌ ಸುಹಾಸ್‌ ಶೆಟ್ಟಿ (31) ಪಾರ್ಥಿವ ಶರೀರದ ಅಂತ್ಯಕ್ರಿಯೆ ಹುಟ್ಟೂರಾದ ಬಂಟ್ವಾಳ ತಾಲ್ಲೂಕಿನ ಕಾರಿಂಜದಲ್ಲಿ ಶುಕ್ರವಾರ ನೆರವೇರಿತು.

ಈ ಹತ್ಯೆ ನಡೆದ ಬೆನ್ನಲ್ಲೇ ಶುಕ್ರವಾರ ನಸುಕಿನಲ್ಲಿ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಒಂದು ಕಡೆ ಚೂರಿ ಇರಿತ ಹಾಗೂ ಎರಡು ಕಡೆ ಹಲ್ಲೆಗಳು ನಡೆದಿವೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 

ಅಂತಿಮ ಯಾತ್ರೆ: ಸುಹಾಸ್ ಶೆಟ್ಟಿ ಪಾರ್ಥಿವಶರೀರವನ್ನು ನಗರದ ಎ.ಜೆ ಆಸ್ಪತ್ರೆಯಿಂದ ಅವರ ಹುಟ್ಟೂರಾದ ಬಂಟ್ವಾಳ ತಾಲ್ಲೂಕಿನ ಕಾರಿಂಜಕ್ಕೆ ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ಮೆರವಣಿಗೆಯಲ್ಲಿ ಒಯ್ಯಲಾಯಿತು. ಹಿಂದುತ್ವವಾದಿ ಕಾರ್ಯಕರ್ತರು ಅಂತಿಮ ಯಾತ್ರೆಯ ವಾಹನವನ್ನು ಹಿಂಬಾಲಿಸಿದರು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಗುಂಪುಗುಂಪಾಗಿ ನಿಂತಿದ್ದ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆ ನಡೆದ ಕಾರಿಂಜದಲ್ಲಿಯೂ ಭಾರಿ ಸಂಖ್ಯೆಯಲ್ಲಿ ಹಿಂದುತ್ವವಾದಿ ಕಾರ್ಯಕರ್ತರು ಸೇರಿದ್ದರು. ಹಿಂದುತ್ವ ಪರ ಘೋಷಣೆ ಕೂಗಿದರು.

ADVERTISEMENT

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸ್ಥಳೀಯ ಬಿಜೆಪಿ ಶಾಸಕರು, ಶಾಸಕ ಬಸನಗೌಡ ಪಾಟಿಲ ಯತ್ನಾಳ, ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಮತ್ತಿತರರು ಅಂತಿಮ ದರ್ಶನ ಪಡೆದರು.

ದ.ಕ ಸ್ತಬ್ಧ: ಈ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಇಡೀ ಜಿಲ್ಲೆಯ ಬಹುತೇಕ ಕಡೆ ಅಂಗಡಿಗಳು ಮುಚ್ಚಿದ್ದವು. ಬಸ್‌ ಸಂಚಾರ ಸ್ಥಗಿತದಿಂದಾಗಿ ಜನ ಜೀವನ ಸ್ತಬ್ಧಗೊಂಡಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದೇ 6ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಂಗಳೂರಿನಿಂದ ಬಂದ ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಾಗೂ ಎರಡು ಖಾಸಗಿ ಬಸ್‌ಗಳಿಗೆ
ಕಿಡಿಗೇಡಿಗಳು ನಗರದಲ್ಲಿ ನಸುಕಿನಲ್ಲಿ ಕಲ್ಲು ತೂರಿದ್ದರು. ಇದರ ಬೆನ್ನಲ್ಲೇ ಖಾಸಗಿ ಬಸ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಉದ್ಯೋಗಕ್ಕೆ ಹೋಗುವವರು, ಹೊರ ಜಿಲ್ಲೆಗಳಿಂದ ಇಲ್ಲಿಗೆ ಬಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಕೆಲವೆಡೆ ಹಿಂದುತ್ವವಾದಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. 

ದ್ವಿತೀಯ ಪಿಯುಸಿ–2 ಗಣಿತ ಪರೀಕ್ಷೆ, ಬಿ– ಫಾರ್ಮಾ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಹೊರಟಿದ್ದ ಕೆಲವು ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡಿದರು. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಮೂರು ಕಾಲೇಜುಗಳಲ್ಲಿ ಗುರುವಾರ ನಡೆಯಬೇಕಿದ್ದ ಎಂಬಿಎ ಪರೀಕ್ಷೆ ಮುಂದೂಡಲಾಯಿತು. ಬಿ–ಫಾರ್ಮಾ ಪರೀಕ್ಷೆಯನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಮುಂದೂಡಿತು.

ಬಜಪೆಯ ಕಿನ್ನಿಪದವು ಎಂಬಲ್ಲಿ ರೌಡಿ ಶೀಟರ್‌ ಸುಹಾಸ್‌ ಶೆಟ್ಟಿಯನ್ನು ದುಷ್ಕರ್ಮಿಗಳು ತಲವಾರಿನಿಂದ ಕೊಚ್ಚಿ ಗುರುವಾರ ರಾತ್ರಿ ಕೊಲೆ ಮಾಡಿದ್ದರು. ಸುಹಾಸ್‌ ಶೆಟ್ಟಿ, ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್‌ ಫಾಝಿಲ್ ಹತ್ಯೆ ಪ್ರಕರಣ ಪ್ರಮುಖ ಆರೋಪಿಯಾಗಿದ್ದ. ಪ್ರವೀಣ್‌ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಮಹಮ್ಮದ್‌ ಫಾಝಿಲ್‌ ಹತ್ಯೆ ನಡೆದಿತ್ತು ಎಂದು ಹೇಳಲಾಗಿತ್ತು.

ಮತ್ತೆ ನಾಲ್ವರ ಮೇಲೆ ದಾಳಿ

ಮಂಗಳೂರು ಹೊರವಲಯದ ಕಲ್ಲಾಪುವಿನ ಹಣ್ಣು– ತರಕಾರಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಾಗಿರುವ ನೌಷಾದ್‌ ಅಹ್ಮದ್‌ ನಸುಕಿನಲ್ಲಿ ಬಸ್‌ಗಾಗಿ ಕಾಯುತ್ತಾ ಕಣ್ಣೂರು ಬಸ್‌ನಿಲ್ದಾಣದ ಬಳಿ ನಿಂತಿದ್ದರು. ಆಗ ಅಲ್ಲಿಗೆ ಬಂದ ಮೂವರು ಅವರಲ್ಲಿ ‘ಮಂಗಳೂರಿಗೆ ಬಸ್‌ ಇದೆಯಾ’ ಎಂದು ವಿಚಾರಿಸಿದರು. ಅವರು ಉತ್ತರಿಸಲು ಮುಂದಾಗುತ್ತಿದ್ದಂತೆಯೇ ಡ್ಯಾಗರ್‌ನಿಂದ ಹೊಟ್ಟೆಗೆ ಇರಿದಾಗ,  ನೌಷಾದ್ ಕೈ ಅಡ್ಡ ಹಿಡಿದು ತಪ್ಪಿಸಿಕೊಳ್ಳಲು ಯತ್ನಿಸಿದರು. ಅವರು ತಿರುಗಿದಾಗ ಬೆನ್ನಿಗೆ ಡ್ಯಾಗರ್‌ನಿಂದ ಇರಿದರು. ಅದನ್ನು ತಿರುಗಿಸುವಾಗ ಡ್ಯಾಗರ್‌ ತುಂಡಾಗಿದ್ದು, ಅದರ ಸುಮಾರು ನಾಲ್ಕು ಇಂಚು ಉದ್ದದ ಭಾಗ ಬೆನ್ನಿನಲ್ಲಿ ಸಿಲುಕಿತ್ತು’ ಎಂದು ಅವರ ಸೋದರ ಜುನೈದ್ ಅಹ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಶಸ್ತ್ರಚಕಿತ್ಸೆ ಬಳಿಕ ಡ್ಯಾಗರ್‌ ತುಂಡನ್ನು ಹೊರತೆಗೆಯಲಾಗಿದೆ. ನೌಷಾದ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜುನೈದ್‌ ತಿಳಿಸಿದ್ದಾರೆ. ನೌಷಾದ್ ಅವರಿಗೆ ಪತ್ನಿ, ನಾಲ್ಕು ವರ್ಷದ ಮಗಳು, ಆರು ತಿಂಗಳ ಗಂಡು ಮಗು ಇದೆ. ಅವರು ಪತ್ನಿ ಮಕ್ಕಳು, ತಂದೆ ತಾಯಿ, ಇಬ್ಬರು ಸೋದರರ ಜೊತೆ  ಕಣ್ಣೂರು ಮಸೀದಿ ಬಳಿ ನೆಲಸಿದ್ದರು.

ಉಳ್ಳಾಲ ಸಮೀಪದ ತೊಕ್ಕೊಟ್ಟು ಮಾಯ ಬಾರ್ ಎದುರುಗಡೆ ಶುಕ್ರವಾರ ತಡರಾತ್ರಿ ಅಲೇಕಳ ನಿವಾಸಿ ಫೈಝಲ್ ಎಂಬುವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಲಾಗಿದೆ.  ಅವರು ಸೋಮೇಶ್ವರದಲ್ಲಿರುವ ಪತ್ನಿಯ ಮನೆಯಿಂದ ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾರುಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿರುವಾಗ ಕೆಲವರು ತಲವಾರು ಬೀಸಿದ್ದು, ಬೆನ್ನಿನಲ್ಲಿ ಗಾಯಗಳಾಗಿವೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕುಂಟಿಕಾನದ ಬಳಿ ಯುವಕನೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.

ಉಡುಪಿಯ ಹಿರಿಯಡ್ಕ ವ್ಯಾಪ್ತಿಯ ಶೇಡಿಗುಡ್ಡೆ ಎಂಬಲ್ಲಿ ಆಟೊ ಚಾಲಕ ಆತ್ರಾಡಿಯ ಅಬೂಬಕ್ಕರ್‌ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್‌ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಉಡುಪಿ ಎಸ್‌ಪಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

ಬಿಜೆಪಿಯಿಂದ ₹25 ಲಕ್ಷ ಪರಿಹಾರ

‘ಸುಹಾಸ್‌ ಶೆಟ್ಟಿ ಅವರದ್ದು ಬಡ ಕುಟುಂಬ. ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆ ಕುಟುಂಬದ ಆಧಾರ ಸ್ತಂಭವೇ ಇಲ್ಲವಾಗಿದೆ. ಹೀಗಾಗಿ ಪಕ್ಷದಿಂದ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಈ ಕುಟುಂಬಕ್ಕೆ ರಾಜ್ಯ ಸರ್ಕಾರವೂ ಪರಿಹಾರ ನೀಡಬೇಕು. ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು  ಎಂದು ಅವರು ಆಗ್ರಹಿಸಿದರು.

ವಿಷಯಾಂತರಕ್ಕೆ ಯತ್ನ: ‘ಸಿದ್ದರಾಮಯ್ಯ ಸಿಎಂ ಆದ ತಕ್ಷಣ ಇಂತಹ ದೇಶದ್ರೋಹಿ ಶಕ್ತಿಗಳಿಗೆ ಬಲ ಬರುತ್ತದೆ. ಅದು ಮತ್ತೊಮ್ಮೆ ಮಂಗಳೂರಲ್ಲಿ ಸಾಬೀತಾಗಿದೆ. ಸುಹಾಸ್‌ ಶೆಟ್ಟಿ ಹತ್ಯೆ ಬಗ್ಗೆ ಸಿ.ಎಂ ಮಾತನಾಡಲ್ಲ. ಯು.ಟಿ ಖಾದರ್‌ ಅವರಿಗೆ ಬೆದರಿಕೆ ಬಂದಿದೆ, ನನಗೂ ಬೆದರಿಕೆ ಕರೆ ಬಂದಿದೆ ಎಂದು ಹೇಳುತ್ತ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಆರೋಪಿಸಿದರು.

‘2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐನ ಎಲ್ಲ ಪ್ರಕರಣ ವಾಪಸ್‌ ಪಡೆಯಿತು. ಅದರಿಂದಾಗಿ ನಾವು 22–23 ಯುವಕರನ್ನು ಕಳೆದುಕೊಳ್ಳಬೇಕಾಯಿತು. ಅಮಿತ್‌ ಶಾ ಅವರಿಗೆ ನಾನು ಅಂದೇ ಹೇಳಿದ್ದೆ. ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ ಸುಟ್ಟವರ ಮೇಲಿನ ಪ್ರಕರಣವನ್ನೂ ಈ ಸರ್ಕಾರ ಹಿಂಪಡೆಯಿತು. ಹೀಗಾಗಿ ಅಪರಾಧಿಗಳಿಗೆ ಸರ್ಕಾರ ತಮ್ಮ ಪರವಾಗಿದೆ ಎಂಬ ಭಾವನೆ ಇದೆ. ಸಿರಿಯಾದಲ್ಲಿ ಹೀಗೆ ಕೊಲೆ ಮಾಡುತ್ತಾರೆ ಎಂಬುದನ್ನು ನಾವು ಮಾಧ್ಯಮದಲ್ಲಿ ನೋಡುತ್ತಿದ್ದೆವು.  ಅದನ್ನೇ ನಮ್ಮ ಸುಹಾಸ್‌ ಶೆಟ್ಟಿ ಅವರಿಗೂ ಮಾಡಿದ್ದಾರೆ’ ಎಂದರು.

ಆರೋಪಿಗಳ ಸುಳಿವು: ಶೀಘ್ರ ಬಂಧನ

ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಹೆಸರು ಸಹಿತ ಸುಳಿವು ದೊರೆತಿದೆ. ಆರೋಪಿಗಳನ್ನು ಬಂಧಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ತಪ್ಪು ಮಾಡಿದ್ದು ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಭದ್ರತೆಗಾಗಿ 22 ಕೆಎಸ್‌ಆರ್‌ಪಿ , ಐವರು ಎಸ್‌ಪಿ, ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಪೊಲೀಸ್ ಇಲಾಖೆ ವಾಸ್ತವದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.