ಕಾರಿಂಜ (ದಕ್ಷಿಣ ಕನ್ನಡ): ಕ್ಯಾನ್ಸರ್ ಪೀಡಿತ ತಾಯಿ, ವಯಸ್ಸಾದ ತಂದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಕಣ್ಣೆದುರೇ ಬೆಳೆದ ಮಗನ ಪಾರ್ಥಿವ ಶರೀರವು ಮೈಮೇಲೆ ಗಂಧದ ಮಾಲೆಗಳನ್ನು ಹೊದ್ದುಕೊಂಡು ಮನೆಯಂಗಳಕ್ಕೆ ಬಂದಾಗ ಈ ಹಿರಿಯ ಜೀವಗಳಿಗೆ ಹಿಡಿದಿಟ್ಟುಕೊಂಡ ನೋವನ್ನು ತಡೆಯಲಾಗಲಿಲ್ಲ. ಮನದಲ್ಲಿ ಮಡುಗಟ್ಟಿದ ದುಃಖ ಕಣ್ಣೀರ ಧಾರೆಯಾಗಿ ಹರಿಯಿತು.
ಮಗನ ಬದುಕಿನಲ್ಲಿ ಹಿಂದುತ್ವವಾದಿ ಚಟುವಟಿಕೆಯ ಜೊತೆಗೆ ಅಪರಾಧಿ ಚಟುವಟಿಕೆ ಬೆಸದುಕೊಂಡಿದ್ದು ತಂದೆ ತಾಯಿಗೆ ಅರಿವಿರಲಿಲ್ಲ ಎಂದಲ್ಲ. ತಮ್ಮ ಮಗನೂ ಎಲ್ಲರಂತೆ ನಿರಾಳವಾಗಿ ಬದುಕಬೇಕು ಎಂಬ ಹಂಬಲ ಹೊತ್ತ ತಂದೆತಾಯಿಯ ಕನಸನ್ನು ಈ ಘಟನೆ ನುಚ್ಚುನೂರು ಮಾಡಿದೆ.
‘ಬೆಳ್ತಂಗಡಿಯಲ್ಲಿ ನನ್ನ ತಮ್ಮನ ಮಗಳ ಮದುವೆಯಲ್ಲಿ ಓಡಾಡಿಕೊಂಡು ಎಲ್ಲ ವ್ಯವಸ್ಥೆ ಮಾಡಿದ್ದ. ಅಲ್ಲಿ ಎರಡು ದಿನ ಇದ್ದು ಮದುವೆ ಕಾರ್ಯ ಮುಗಿಸಿಕೊಂಡು ಹೋಗಿದ್ದ. ಇವತ್ತು ಇಲ್ಲೇ ಇರು ಎಂದರೂ ಕೇಳಲಿಲ್ಲ. ಏ.30ಕ್ಕೆ ಅವನನ್ನು ಕೊನೆ ಸಲ ನೋಡಿದ್ದೆ’ ಎಂದು ಸುಹಾಸ್ ಶೆಟ್ಟಿ ಅವರ ತಂದೆ ಮೋಹನ ಶೆಟ್ಟಿ ತಿಳಿಸಿದರು.
‘ತಮ್ಮನ ಮಗಳ ಮದುವೆಯ ಬಳಿಕದ ಕಾರ್ಯಕ್ರಮದಲ್ಲಿ ನಾವು ಗುರುವಾರ ರಾತ್ರಿ ಊಟ ಬಡಿಸುತ್ತಿದ್ದೆವು. ಆತನ ಮಗನ ಸ್ನೇಹಿತರಿಗೆ ಫೋನ್ ಕರೆ ಬಂತು. ಹಲ್ಲೆಯಿಂದ ಗಾಯಗೊಂಡ ಮಗನನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆತ ಹುಷಾರಾಗಿದ್ದಾನೆ ಎಂದರು. ಆದರೆ ರಾತ್ರಿ 11 ಗಂಟೆಗೆ ಸುಮಾರಿಗೆ ಆತ ಮೃತಪಟ್ಟಿದ್ದು ಗೊತ್ತಾಯಿತು’ ಎಂದು ಅವರು ತಿಳಿಸಿದರು.
‘ಮಗನದ್ದೂ ಸೇಡಿನ ಕೊಲೆಯೇ. ಸುರತ್ಕಲ್‌ನಲ್ಲಿ ಎರಡು ವರ್ಷ ಹಿಂದೆ ನಡೆದ ಫಾಝಿಲ್ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿರಬಹುದು. ತನ್ನನ್ನು ನಗರದಿಂದ ಯಾರೋ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ಆರು ತಿಂಗಳು ಹಿಂದೆ ಹೇಳಿದ್ದ. ಅವನು ಬಜಪೆಯಲ್ಲೇ ಇದ್ದುದು ಹೆಚ್ಚು. ಎಲ್ಲರಂತೆ ನಾನು ಬದುಕಬೇಕು ಎಂದು ಆತನಿಗೂ ಹಂಬಲ ಇತ್ತು. ಇವೆಲ್ಲ ಬೇಡ ಎಂದು ಆಗಾಗ ಹೇಳುತ್ತಿದ್ದ’ ಎಂದು ಮೋಹನ ಶೆಟ್ಟಿ ನೆನಪಿಸಿಕೊಂಡರು.
‘ನನ್ನ ಇಬ್ಬರು ಗಂಡು ಮಕ್ಕಳಲ್ಲಿ ಸುಹಾಸ್ ದೊಡ್ಡವನು. ಏಳೆಂಟು ವರ್ಷದವನಿದ್ದಾಗಲೇ ಹಿಂದುತ್ವದ ಕೆಲಸಗಳಿಗೆ ಹೋಗುತ್ತಿದ್ದ. ನಾವೂ ಪ್ರೋತ್ಸಾಹ ಮಾಡಿದ್ದೆವು. ನಮ್ಮ ಜೀವನಕ್ಕೆ ಇವನೇ ಆಧಾರಸ್ತಂಭವಾಗಿದ್ದ. ಮಂಗಳೂರಲ್ಲಿ ಮರಳು ವ್ಯಾಪಾರ ಹಾಗೂ ಲಾರಿ ಇಟ್ಟು ಕೊಂಡು ವ್ಯಾಪಾರ ಮಾಡುತ್ತಿದ್ದ’ ಎಂದು ಅವರು ತಿಳಿಸಿದರು.
‘ಕಾರಿಂಜದಲ್ಲಿ ತಮ್ಮ ಪೂರ್ವಜರಿಂದ ಬಂದ ಜಮೀನಿನಲ್ಲಿ ಸುಹಾಸ್ ಶೆಟ್ಟಿ ಮೂರು ವರ್ಷಗಳ ಹಿಂದೆ ಅಡಿಕೆ ಸಸಿಗಳನ್ನು ನೆಡಿಸಿದ್ದ. ಅವು ಈಗ ಫಲಬಿಡುವ ಹಂತವನ್ನು ತಲುಪಿವೆ. ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆಯಲ್ಲಿ ಬಂಧನಕ್ಕೊಳಗಾದ ಬಳಿಕ ಅಪರಾಧ ಕೃತ್ಯಗಳಿಂದ ದೂರವೇ ಇದ್ದ. ಬೈಕಂಪಾಡಿ ಬಳಿ ಪರಿಕರಗಳ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಅಪರಾಧ ಜಗತ್ತಿನಿಂದ ಹೊರಗೆ ಬರಬೇಕೆನ್ನುವಷ್ಟರಲ್ಲಿ ಈ ರೀತಿಯಾಗಿದೆ’ ಎಂದು ಬೇಸರ ತೋಡಿಕೊಳ್ಳುತ್ತಾರೆ ಸ್ಥಳೀಯರು.
‘ನಾವು ಬಾಲ್ಯದಿಂದಲೂ ಅವನನ್ನು ಬಲ್ಲೆವು. ಎಲ್ಲರಿಗೂ ನೆರವಾಗುವ ಸ್ವಭಾವ ಅವನದು. ಅವನನ್ನು ಈ ರೀತಿ ನೋಡುತ್ತೇವೆ ಎಂದು ಯಾವತ್ತೂ ಭಾವಿಸಿರಲಿಲ್ಲ’ ಎಂದು ಸುಹಾಸ್ ಶೆಟ್ಟಿ ಸಹಪಾಠಿ ಹೇಳಿದರು.
‘ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ’
‘ನನ್ನ ಮಗ ಹಿಂದುತ್ವಕ್ಕೆ ಹೋರಾಟ ಮಾಡುತ್ತೇನೆ ಎನ್ನುತ್ತಿದ್ದ. ಅವನ ಉಸಿರನ್ನೇ ನಿಲ್ಲಿಸಿಬಿಟ್ಟರು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಯಾರೇ ಆಗಲಿ. ಇನ್ನೊಂದು ಸಲ ಹೀಗೆ ಆಗಬಾರದು’ ಎಂದು ಸುಹಾಸ್ ಶೆಟ್ಟಿ ಅವರ ತಾಯಿ ಸುಲೋಚನಾ ಹೇಳಿದರು.
‘ಮಗ ಮನೆಯ ದೀಪವಾಗಿದ್ದ. ನಿತ್ಯವೂ ಮಗನ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ನಿನ್ನೆ ಮದುವೆ ಕಾರ್ಯಕ್ರಮದಲ್ಲಿದ್ದೆ. ಹಾಗಾಗಿ ನಿನ್ನೆ ಪೋನ್ ಕರೆಗೂ ಸಿಕ್ಕಿಲ್ಲ’ ಎಂದು ಅವರು ಕಣ್ಣೀರಾದರು.
‘ಶೇ 85ರಷ್ಟು ಹಿಂದೂಗಳನ್ನು ಶೇ 15ರಷ್ಟು ಇರುವವರು ಇಷ್ಟು ಹೆದರಿಸಿದ್ದಾರೆ. ಹಿಂದೂಗಳೇ ಹೆದರಬೇಕಾದ ಸ್ಥಿತಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.