ADVERTISEMENT

ಸೋರುತಿಹುದು ಸುಳ್ಯ ಮಿನಿ ವಿಧಾನಸೌಧ...

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:28 IST
Last Updated 27 ಜುಲೈ 2025, 5:28 IST
ಸುಳ್ಯದ ಮಿನಿ ವಿಧಾನಸೌಧ ಸೋರುತ್ತಿದೆ
ಸುಳ್ಯದ ಮಿನಿ ವಿಧಾನಸೌಧ ಸೋರುತ್ತಿದೆ   

ಸುಳ್ಯ: ನಾಲ್ಕು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡ ಸುಳ್ಯದ ಮಿನಿ ವಿಧಾನ ಸೌಧ ಸೋರುತ್ತಿದೆ. ಕೆಲವು ದಾಖಲೆಗಳು ನೆನೆದು ರಾಶಿ ಬಿದ್ದಿವೆ. ತಾಲ್ಲೂಕು ಅರ್ಜಿ ಸ್ವೀಕಾರ ಕೇಂದ್ರದ ಪಡಸಾಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿಗೆ ಬರುವ ಸಾರ್ವಜನಿಕರು ನೀರು ತುಂಬಿದ ನೆಲದಲ್ಲಿ ಬಿದ್ದು ‌ಏಳಬೇಕಾದ ಸ್ಥಿತಿ ಇದೆ.

ತಾಲ್ಲೂಕು ಆಡಳಿತ ಕೇಂದ್ರವಾದ ಮಿನಿ ವಿಧಾನ ಸೌಧವು ಜಿಲ್ಲೆಯಲ್ಲಿ ಮೊದಲ ಮಿನಿ ವಿಧಾನ ಸೌಧ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2021ರಲ್ಲಿ ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಲೋಕಾರ್ಪಣೆ ಮಾಡಿದ್ದರು. ಆಗ ಸುಂದರವಾಗಿಯೇ ಇದ್ದ ಸೌಧದ ಕಾಮಗಾರಿಯ ಗುಣಮಟ್ಟ ಬಳಿಕ ‌ಬಯಲಾಗುತ್ತಾ ಬಂತು.

ಗೋಡೆಗಳ ಮಧ್ಯೆ ಅಲ್ಲಲ್ಲಿ ಮಳೆ ನೀರಿನ ತೇವಾಂಶ ಕಾಣಿಸುತ್ತಿತ್ತು. ಇದೀಗ ಕಟ್ಟಡದ ಮೊದಲ ಮತ್ತು ಎರಡನೇ ‌ಮಹಡಿಯಲ್ಲಿ ನೀರು ಸೋರಿಕೆಯಾಗುತ್ತಿದೆ. ಸರ್ವೆ ಇಲಾಖೆಯ ಅಧಿಕಾರಿಗಳು ಕುಳಿತುಕೊಳ್ಳುವ ಕೊಠಡಿಯಲ್ಲಿ ಸಂಪೂರ್ಣ ನೀರು ಸೋರಿಕೆಯಾಗುತ್ತಿದ್ದು, ಕಡತಗಳನ್ನು ಬೇರೆ ಕೊಠಡಿಯಲ್ಲಿ ಇಡುವಂತಾಗಿದೆ. ಕಂದಾಯ ಇಲಾಖೆಯ ಭೂಮಿ ಕೇಂದ್ರ ಹಾಗೂ ಜನನ–ಮರಣ, ಪಿಪಿಡಿಆರ್, ತಸ್ತಿಕ್ ಬಾಕ್ಸ್ ಹಾಗೂ ಪಿಂಚಣಿ ಅಧಿಕಾರಿ ಕುಳಿತುಕೊಳ್ಳುವ ಕೊಠಡಿಗಳ ಬಳಿಯಲ್ಲೂ ನೀರು ಜಿನುಗುತ್ತಿದೆ. ನೀರಿಗೆ ಹೆಜ್ಜೆ ಇಟ್ಟರೆ ಕಾಲು ಜಾರಿ ಬೀಳುವ ಸಂಭವ ಇದ್ದು, ಅಲ್ಲಲ್ಲಿ ಮ್ಯಾಟ್ ಹಾಗೂ ಗೋಣಿ ಚೀಲಗಳನ್ನು ನೆಲದ ಮೇಲೆ ಹಾಸಲಾಗಿದೆ. ಭೂಮಾಪನ ಇಲಾಖೆ ಕೊಠಡಿಯ ಗೋಡೆಯಲ್ಲಿ ಬಿರುಕು ಬಿಟ್ಟಿದೆ‌.

ADVERTISEMENT

ಪಡಶಾಲೆ ಈಜುಕೊಳ!: ಅರ್ಜಿ ಸ್ವೀಕರಿಸುವ ಪಡಸಾಲೆ ಈಜುಕೊಳದಂತಿದೆ. ಹೆಂಚಿನ ಚಾವಣಿ ಹೊಂದಿರುವ ಪಡಶಾಲೆಯ ಮೇಲೆ ತಿಂಗಳ ಹಿಂದೆ ಮರದ ಕೊಂಬೆ ಬಿದ್ದಿತ್ತು. ಒಡೆದ ಹೆಂಚಿನ ಭಾಗಕ್ಕೆ ಟಾರ್ಪಲ್ ಹೊದಿಕೆ ಅಳವಡಿಸಲಾಗಿತ್ತು. ಆದರೆ, ಇದೀಗ ಟಾರ್ಪಲ್ ಹಾರಿ ಹೋಗಿದ್ದು, ಪಡಶಾಲೆಯಲ್ಲಿ ಮಳೆ ನೀರು ತುಂಬಿದೆ. ಆಹಾರ ಇಲಾಖೆ ಹಾಗೂ ಪಡಶಾಲೆಯಲ್ಲಿ ಅರ್ಜಿ ನೀಡಲು ತೆರಳುವವರು ಜಾರಿ ಬೀಳುವ ಆತಂಕ ಎದುರಾಗಿದೆ. ಮಳೆ ನೀರು ಬೀಳುವ ಜಾಗದಲ್ಲಿ ಪಾತ್ರೆ ಇಡಲಾಗಿದೆ.

‘ಇತ್ತೀಚೆಗೆ ಬೀಸಿದ ಗಾಳಿಗೆ ಪಡಶಾಲೆಯ ಬಳಿಯಲ್ಲಿನ ಮರದ ಕೊಂಬೆ ಮುರಿದು ಪಡಶಾಲೆಯ ಚಾವಣಿ ಹಾನಿಯಾಗಿ ನೀರು ಬರುತ್ತಿದೆ. ಪಡಶಾಲೆ ಹಾಗೂ ಮಿನಿ ವಿಧಾನ ಸೌಧದಲ್ಲಿ ನಡೆದಾಡಲು ಮ್ಯಾಟ್ ಅಳವಡಿಸಲಾಗಿದೆ. ಸಮಸ್ಯೆ ನಿವಾರಣೆಗೆ ನಿರ್ಮಿತಿ ಕೇಂದ್ರದ ಮೂಲಕ ಪ್ರಸ್ತಾವನೆ ಕಳುಹಿಸಲಾಗಿದೆ’ ಎಂದು ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.

‘ಮಿನಿ ವಿಧಾನಸೌಧ ಮತ್ತು ಪಡಸಾಲೆಯಲ್ಲಿ ನೀರು ಸೋರಿಕೆಯಾಗಿ ತೊಂದರೆ ಆಗುತ್ತಿದೆ. ಇದನ್ನು ಆದಷ್ಟು ಬೇಗ ಸರಿಮಾಡಿಕೊಂಡು ಬೇಕು’ ಎಂದು ಕೃಷಿಕ ಕುಶಾಲಪ್ಪ ಗೌಡ ಒತ್ತಾಯಿಸಿದರು.

ಸುಳ್ಯದ ಮಿನಿ ವಿಧಾನಸೌಧ ಸೋರುತ್ತಿದೆ
ಸುಳ್ಯದ ಮಿನಿ ವಿಧಾನಸೌಧ ಸೋರುತ್ತಿದೆ
ಸುಳ್ಯದ ಮಿನಿ ವಿಧಾನಸೌಧ ಸೋರುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.