ADVERTISEMENT

ಪಡಿತರದಲ್ಲಿ ಸ್ಥಳೀಯ ಕುಚಲಕ್ಕಿ: ಸಿಎಂ ಸಮ್ಮತಿ

ಸಂಸದ ನಳಿನ್‌, ಸಚಿವ ಪೂಜಾರಿ ನೇತೃತ್ವದ ನಿಯೋಗಕ್ಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 10:57 IST
Last Updated 16 ಸೆಪ್ಟೆಂಬರ್ 2022, 10:57 IST
ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಸ್ಥಳೀಯ ಕುಚಲಕ್ಕಿ ಪೂರೈಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಸಲ್ಲಿಸಿದರು
ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಸ್ಥಳೀಯ ಕುಚಲಕ್ಕಿ ಪೂರೈಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಸಲ್ಲಿಸಿದರು   

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರ ಪ್ರಮುಖ ಆಹಾರವಾಗಿರುವ ಗುಣಮಟ್ಟದ ಕುಚಲಕ್ಕಿಯನ್ನು ಪಡಿತರ ಚೀಟಿದಾರರಿಗೆ ಪೂರೈಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಅವರು ಗುರುವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ಧತಿ ಅಡಿ ಕುಚಲಕ್ಕಿಯನ್ನು ವಿತರಿಸಲು ಅಗತ್ಯವಾದ ₹299.33 ಕೋಟಿ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ.

ADVERTISEMENT

ಈ ಜಿಲ್ಲೆಗಳಲ್ಲಿ ಪಡಿತರ ವಿತರಣಾ ಪದ್ಧತಿ ಅಡಿ ವಿತರಿಸುತ್ತಿರುವ ಅಕ್ಕಿಯ ಪ್ರಮಾಣದಲ್ಲಿ ಶೇ 50ರಷ್ಟು ಕುಚಲಕ್ಕಿಯನ್ನು ವಿತರಿಸಲಾಗುತ್ತಿದೆ. ಈ ಅಕ್ಕಿಯನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಲಾಗುತ್ತಿದೆ. ಆದರೆ ಅಕ್ಕಿಯ ರುಚಿಯ ಪ್ರಮಾಣ ಕಡಿಮೆ ಇದ್ದು ಇದರ ಆಹಾರವನ್ನು ಸೇವಿಸಲಾಗುವುದಿಲ್ಲ ಎಂಬುದಾಗಿ ಈ ಭಾಗದ ಪಡಿತರ ಚೀಟಿದಾರರಿಂದ ಹಾಗೂ ಸ್ಥಳೀಯ ಶಾಸಕರಿಂದ ದೂರುಗಳು ಬಂದಿವೆ. ಹೀಗಾಗಿ ಕುಚಲಕ್ಕಿಯನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡದೇ ಸ್ಥಳೀಯವಾಗಿ ಸರ್ಕಾರವೇ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿಸಿ ಅದರಿಂದ ಕುಚಲಕ್ಕಿ ತಯಾರಿಸಿ ವಿತರಿಸಲಾಗುವುದು. ಇದರಿಂದ ಪಡಿತರ ಚೀಟಿದಾರರಿಗೆ ಉತ್ತಮ ಆಹಾರ ಸಿಗುತ್ತದೆ. ಜೊತೆಗೆ ಸ್ಥಳೀಯ ರೈತರಿಗೂ ಅನುಕೂಲವಾಗಲಿದೆ ಎಂದು ಸಂಸದರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.

ಈಗಾಗಲೇ ಕೇರಳ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದಾಗಿ ಮುಖ್ಯಮಂತ್ರಿ ಗಮನಕ್ಕೆ ತರಲಾಯಿತು.

ಪ್ರಸ್ತುತ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ಉಪಯೋಗಿಸುತ್ತಿದ್ದು, ಈ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕೇರಳದ ಮಾದರಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಿ ಪರಿವರ್ತಿತ ಕುಚಲಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಿದರೆ ಆ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುವ ಬಗ್ಗೆ ನಿಯೋಗ ಮನದಟ್ಟು ಪಡಿಸಿತು.

ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಅವರು ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದು ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂದು ನಳಿನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.