ADVERTISEMENT

ಭರವಸೆಗಳ ಮೇಲೆ ಭರವಸೆಯೇ ಉಳಿದಿಲ್ಲ: ಹೋರಾಟ ಸಮಿತಿ

ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ * ಹೋರಾಟ ಕೈಬಿಡುವಂತೆ ಮನವೊಲಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 15:53 IST
Last Updated 14 ಅಕ್ಟೋಬರ್ 2022, 15:53 IST

ಮಂಗಳೂರು: ಸುರತ್ಕಲ್‌ ಟೋಲ್‌ ಗೇಟ್‌ ಅನ್ನು ಜನರೇ ತೆರವು ಗೊಳಿಸುವ ಕಾರ್ಯಾಚರಣೆಯನ್ನು ಇದೇ 18 ರಂದು ಹಮ್ಮಿಕೊಳ್ಳಲು ನಿರ್ಧರಿಸಿರುವ ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಲ್ಲಲ್ಲಿ ಜನಜಾಗೃತಿ ಜಾಥಾ ಹಾಗೂ ಸಭೆಗಳನ್ನು ನಡೆಸುತ್ತಿದೆ. ಇದರ ಬೆಳವಣಿಗೆಯ ಬೆನ್ನಲ್ಲೇ ಈ ಪ್ರತಿಭಟನೆ ಕೈಬಿಡುವಂತೆ ಸಮಿತಿಯ ಮನವೊಲಿಸಲು ಜಿಲ್ಲಾಡಳಿತ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿವೆ.

ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಮಿತಿಯ ಪ್ರಮುಖರ ಜೊತೆ ಶುಕ್ರವಾರ ಸಭೆ ನಡೆಸಲಾಯಿತು. ಪಣಂಬೂರು ಎಸಿಪಿ ಮಹೇಶ್‌ ಕುಮಾರ್ ಹಾಗೂ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಟೋಲ್‌ ಪ್ಲಾಜಾ ತೆರವು ಸಂಬಂಧ ಆಗಿರುವ ಬೆಳವಣಿಗೆಗಳ ಬಗ್ಗೆ ಸಮಿತಿಯ ಪ್ರಮುಖರಿಗೆ ಮಾಹಿತಿ ನೀಡಿದರು.

‘ಸುರತ್ಕಲ್ ಟೋಲ್ ಗೇಟ್‌ ತೆರವುಗೊಳಿಸುವ ತೀರ್ಮಾನವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಈ ಕುರಿತ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲಿಯವರಗೆ ಹೋರಾಟ ಕೈ ಬಿಡಬೇಕು’ ಎಂದು ಲಿಂಗೇಗೌಡ ಅವರು ತಿಳಿಸಿದರು.

ADVERTISEMENT

‘ಟೋಲ್‌ ಗೇಟ್‌ ಕೆಲವೇ ದಿನಗಳಲ್ಲಿ ತೆರವು ಎಂಬ ಬಾಯಿಮಾತಿನ ಭರವಸೆ ಬೇಡ. ತೆರವಿನ ನಿರ್ದಿಷ್ಟ ದಿನಾಂಕವನ್ನು ಪ್ರಕಟಿಸಿ‘ ಎಂದು ಸಮಿತಿಯ ಪ್ರಮುಖರು ಪಟ್ಟುಹಿಡಿದರು.

‘ಆರು ವರ್ಷಗಳಲ್ಲಿ ಈ ರೀತಿ ಹಲವು ಭರವಸೆಗಳನ್ನು ನೀಡಲಾಗಿದೆ. ಆರು ತಿಂಗಳುಗಳಲ್ಲಿ ಸರ್ಕಾರದ ಹಲವು ವೇದಿಕೆ, ವಿಧಾನ ಸಭೆಯಲ್ಲಿಯೂ ‘ತಿಂಗಳೊಳಗೆ ಟೋಲ್ ಗೇಟ್ ತೆರವು‘ ಎಂಬ ಹೇಳಿಕೆಗಳು ಪುಂಖಾನುಪುಂಕವಾಗಿ ಹೊರಬಿದ್ದಿವೆ. ಆದರೆ ಒಂದು ಭರವಸೆಯೂ ಜಾರಿಗೆ ಬಂದಿಲ್ಲ. ಇಂತಹ ಭರವಸೆಗಳು ಜಾರಿಗೆ ಬರುತ್ತದೆ ಎಂಬ ವಿಶ್ವಾಸವನ್ನೇ ಜನರು ಕಳೆದುಕೊಂಡಿದ್ದಾರೆ’ ಎಂದರು.

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ಸಂಘಟನೆಗಳು ಇದೇ 18 ರಂದು ನಡೆಯುವ ‘ಟೋಲ್‌ ಗೇಟ್‌ ಮುತ್ತಿಗೆ’ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ, ಭರವಸೆಯ ಆಧಾರದಲ್ಲಿ‌ ಹೋರಾಟ ಮುಂದೂಡಲು ಅವರು ಯಾರೂ ಸಮ್ಮತಿ ನೀಡಲಾರರು. ಹೋರಾಟವನ್ನು ಒಕ್ಕೊರಲಿನಿಂದ ಬೆಂಬಲಿಸುತ್ತಿರುವ ಜನತೆಯೂ ಇದನ್ನು ಒಪ್ಪವುದಿಲ್ಲ’ ಎಂದು ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಸ್ಪಷ್ಟಪಡಿಸಿದರು.

ಟೋಲ್ ಸಂಗ್ರಹ ತಕ್ಷಣ ಕೈಬಿಡಿ:

‘ಜನರ ಆಕ್ರೋಶ, ಆಗ್ರಹವನ್ನು ಮನ್ನಿಸಿ ಟೋಲ್ ಸಂಗ್ರಹವ‌ನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಇನ್ನು ಕೆಲವೇ ದಿನದಲ್ಲಿ ತೆರವಿಗೆ ಬೇಕಾದ ಪ್ರಕ್ರಿಯೆ ಪೂರ್ಣಗೊಳ್ಳುವುದಾದರೆ, ಅಲ್ಲಿಯವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸುವುದರಿಂದ ಭಾರಿ ನಷ್ಟವೇ‌ನೂ ಆಗುವುದಿಲ್ಲ. ಏಳು ವರ್ಷ ಸತತವಾಗಿ ನೂರಾರು ಕೋಟಿ ರೂಪಾಯಿಯನ್ನು ಸುರತ್ಕಲ್ ಟೋಲ್ ಗೇಟ್ ನಲ್ಲಿ ಸಂಗ್ರಹಿಸಲಾಗಿದೆ’ ಎಂದರು.

ತೆರವು ಹೋರಾಟಕ್ಕೆ ಕೈಜೋಡಿಸಿ: ಸಮಿತಿ

‘ಈಗಾಗಲೇ ತೀರ್ಮಾನಿಸಿರುವಂತೆ ಸುರತ್ಕಲ್‌ ಟೋಲ್ ಗೇಟ್ ತೆರವು ಪ್ರತಿಭಟನೆ ಅ.18ರಂದು ಶಾಂತಿಯುತವಾಗಿ ನಡೆಯಲಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟಕ್ಕೆ ಕೈಜೋಡಿಸಬೇಕು. ಅಂದು ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಸೇರಬೇಕು. ಪ್ರಚೋದನೆಗೆ ಒಳಗಾಗದೆ ಟೋಲ್ ತೆರವು ಹೋರಾಟದ ಯಶಸ್ಸಿಗೆ ಕೈ ಜೋಡಿಸಬೇಕು’ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಮನವಿ ಮಾಡಿದ್ದಾರೆ.

20 ದಿನಗಳಲ್ಲಿ ಸುರತ್ಕಲ್‌ ಟೋಲ್‌ ಗೇಟ್‌ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದೇವೆ. ಸಮಿತಿ ಏನು ಕ್ರಮ ಕೈಗೊಳ್ಳುತ್ತದೊ ಕಾದು ನೋಡಬೇಕು
ಲಿಂಗೇಗೌಡ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ

ಅಧಿಕಾರಿಗಳ ಭರವಸೆಯ ಮಾತುಗಳನ್ನು ನಂಬಿ ಹೋರಾಟ ನಿಲ್ಲಿಸುವುದಿಲ್ಲ. ಸುರತ್ಕಲ್‌ ಟೋಲ್ ಗೇಟ್‌ನಲ್ಲಿ ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಈ ಬಾರಿಯ ಹೋರಾಟ ಮುಗಿಯುವುದಿಲ್ಲ.
ಮುನೀರ್‌ ಕಾಟಿಪಳ್ಳ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.