ADVERTISEMENT

ಸರ್ಕಾರದ ಆದೇಶ ಜಾರಿಗೆ ತರದಿದ್ದರೆ ಡಿಸಿ ವಿರುದ್ಧ ಕೋರ್ಟ್‌ಗೆ: ಕೆಪಿಸಿಸಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 13:50 IST
Last Updated 21 ನವೆಂಬರ್ 2022, 13:50 IST
   

ಮಂಗಳೂರು: ಸುರತ್ಕಲ್ ಟೋಲ್‌ಗೇಟ್‌ ತೆರವು ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿ, 10 ದಿನಗಳು ಕಳೆದರೂ ಇನ್ನೂ ಶುಲ್ಕ ವಸೂಲಿ ನಿಂತಿಲ್ಲ. ಸರ್ಕಾರದ ಆದೇಶವನ್ನು ಜಾರಿಗೆ ತರದಿದ್ದರೆ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆಗೆ, ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸದ ನಳಿನ್‌ಕುಮಾರ್ ಅವರು ನ.12ಕ್ಕೆ ಟ್ವೀಟ್‌ ಮಾಡಿ, ಸುರತ್ಕಲ್ ಟೋಲ್‌ ತೆರವು ಸಂಬಂಧ ನ.11ಕ್ಕೆ ನೋಟಿಫಿಕೇಷನ್ ಆಗಿದ್ದಕ್ಕೆ, ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಇನ್ನೂ ತನಕ ಟೋಲ್ ಸಂಗ್ರಹ ನಿಂತಿಲ್ಲ. ಪ್ರತಿದಿನ ಅಂದಾಜು ₹ 11 ಲಕ್ಷದಷ್ಟು ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ. ಸಂಸದರ ಟ್ವೀಟ್‌ ನಂತರ ಪ್ರಯಾಣಿಕರಲ್ಲೂ ಗೊಂದಲ ಉಂಟಾಗಿದ್ದು, ಪ್ರತಿನಿತ್ಯ ಟೋಲ್‌ಗೇಟ್‌ನಲ್ಲಿ ಪ್ರಯಾಣಿಕರು ಮತ್ತು ಶುಲ್ಕ ಸಂಗ್ರಹ ಸಿಬ್ಬಂದಿ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ’ ಎಂದರು.

ಸುರತ್ಕಲ್ ಟೋಲ್‌ಗೇಟ್ ಅಕ್ರಮ ಅಥವಾ ಸಕ್ರಮ ಎಂಬುದನ್ನು ಸ್ಪಷ್ಟಪಡಿಸಬೇಕಾದ ಜಿಲ್ಲಾಧಿಕಾರಿ ಮೌನವಹಿಸಿದ್ದಾರೆ. ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ 25 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಸ್ಥಳಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆ ಆಗಬಾರದು. ಸ್ವತಂತ್ರ ನಿರ್ಣಯ ಕೈಗೊಳ್ಳಬೇಕು. ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್‌ಗೇಟ್‌ ಜತೆ ವಿಲೀನಗೊಳಿಸಲು ಅಭ್ಯಂತರವಿಲ್ಲ. ಆದರೆ, ಹೆಚ್ಚುವರಿ ಶುಲ್ಕ ವಸೂಲಿ ಮಾಡಿದರೆ, ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ADVERTISEMENT

ಹಾಲಿನ ದರ ಏರಿಕೆ ಮಾಡುವುದಾಗಿ ಸರ್ಕಾರ ಹೇಳಿದೆ. ದರ ಹೆಚ್ಚಳ ಮಾಡಿದರೆ ಎಲ್ಲ ಹಾಲಿನ ಬೂತ್‌ಗಳ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಪ್ರಮುಖರಾದ ಹಬೀಬುಲ್ಲಾ, ಮಲ್ಲಿಕಾ ಟೆಲ್ಲಿಸ್, ಶಬ್ಬೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.