ಮಂಗಳೂರು: ಯುದ್ಧಭೂಮಿಯಲ್ಲಿ ಕಾದಾಡಲು ನೆರವಾಗಿ ಡಿಕಮಿಷನ್ ಆಗಿರುವ ಟಿ–55 ಸರಣಿಯ ಟ್ಯಾಂಕ್ ನಗರದ ಕದ್ರಿಯಲ್ಲಿರುವ ಯುದ್ಧ ಸ್ಮಾರಕದಲ್ಲಿ ಇನ್ನು ಮುಂದೆ ಪ್ರಮುಖ ಆಕರ್ಷಣೆ ಆಗಲಿದೆ. ಪುಣೆಯ ಆರ್ಮಿ ಆರ್ಡಿನೆನ್ಸ್ ಡಿಪೊದಿಂದ ತಂದಿರುವ ಟ್ಯಾಂಕ್ ಸೋಮವಾರ ಸಂಜೆ ನಗರ ತಲುಪಿದೆ.
ಪುಣೆಯಿಂದ ಎರಡು ದಿನಗಳ ಹಿಂದೆ ಹೊರಟ ಟ್ಯಾಂಕ್ ಟ್ರೇಲರ್‌ನಲ್ಲಿ ಟಿ–55 ಟ್ಯಾಂಕನ್ನು ನಗರಕ್ಕೆ ತಂದಿದ್ದು ಸ್ವಾತಂತ್ರ್ಯೋತ್ಸವ ದಿನದ ಮೊದಲೇ ಇಲ್ಲಿ ಇದನ್ನು ಸ್ಥಾಪಿಸಲು ಚಿಂತನೆ ನಡೆದಿದೆ. ಸದ್ಯ ಟ್ರೇಲರ್‌ನಲ್ಲೇ ಇದ್ದು ನೋಡುಗರ ಕುತೂಹಲಕ್ಕೆ ಕಾರಣವಾಗಿದೆ.
‘ಸೇನೆಯಲ್ಲಿ ಬಳಸಿದ ಯಾವುದಾದರೂ ಯಂತ್ರೋಪಕರಣವನ್ನು ನಗರದಲ್ಲಿ ಸ್ಥಾಪಿಸಬೇಕು ಎಂಬ ಬಯಕೆ ಹಿಂದಿನಿಂದಲೇ ಇತ್ತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇದಕ್ಕೆ ಬೆಂಬಲವಾಗಿ ನಿಂತು ಇಲ್ಲಿಗೆ ತರಲು ಪ್ರಯತ್ನಿಸಿದ್ದರು. ನಾಲ್ಕೈದು ತಿಂಗಳ ಪರಿಶ್ರಮದ ನಂತರ ಟ್ಯಾಂಕರ್ ನಗರ ತಲುಪಿದೆ’ ಎಂದು ನಿವೃತ್ತ ಕ್ಯಾಪ್ಟನ್ ದೀಪಕ್ ಅಡ್ಯಂತಾಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೊಸ ಟ್ಯಾಂಕರ್‌ಗಳು ಬರುವ ಮುನ್ನ ಟಿ–54 ಮತ್ತು ಟಿ–55 ಸರಣಿಯ ಟ್ಯಾಂಕ್‌ಗಳೇ ಭಾರತ ಸೇನಾಪಡೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿತ್ತು. ರಾಜಸ್ತಾನದಂಥ ಸಮತಟ್ಟು ಪ್ರದೇಶಗಳಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.