ಮಂಗಳೂರು: ಇಲ್ಲಿನ ತಣ್ಣೀರುಬಾವಿಯ ಕಡಲ ತೀರದ ಆಗಸ ಎಂದಿನಂತಿರಲಿಲ್ಲ. ಬಣ್ಣ ಬಣ್ಣದ, ನಾನಾ ಆಕಾರಗಳ ಗಾಳಿಪಟಗಳು ಇಲ್ಲಿನ ಬಾನಂಗಳದಲ್ಲಿ ರಂಗಿನ ಚಿತ್ತಾರ ಬಿಡಿಸಿದವು. ಪಡುವಣದಿಂದ ಬೀಸಿ ಬಂದ ತಂಗಾಳಿಯ ಅಲೆಯಲ್ಲಿ ತೇಲುತ್ತಾ ರಂಜಿಸಿದ ಈ ಗಾಳಿಪಟಗಳು ಶನಿವಾರ ಮುಸ್ಸಂಜೆ ನೋಡುಗರಿಗೆ ವರ್ಣನಾತೀತ ಅನುಭವ ಕಟ್ಟಿಕೊಟ್ಟವು.
ಕರಾವಳಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಇಲ್ಲಿನವರಿಗೂ ದೇಶವಿದೇಶಗಳ ಗಾಳಿಪಟಗಳ ವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿತು. ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡವು ಒಎನ್‌ಜಿಸಿ ಎಂಆರ್‌ಪಿಎಲ್ ಸಹಕಾರದಲ್ಲಿ ಏರ್ಪಡಿಸಿರುವ ಈ ಉತ್ಸವದಲ್ಲಿ ಈ ಸಲ ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್, ಇಟಲಿ, ಸ್ವೀಡನ್ ಸೇರಿದಂತೆ 10 ದೇಶಗಳ 22 ಗಾಳಿಪಟ ತಂಡಗಳು ಹಾಗೂ ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮತ್ತಿತರ ರಾಜ್ಯಗಳ 30 ತಂಡಗಳು ಪಾಲ್ಗೊಂಡವು. ಜೊತೆಗೆ ಸ್ಥಳೀಯರೂ ಗಾಳಿಪಟಗಳೂ ಹಾರಿಸಿ ಸಂಭ್ರಮಿಸಿದರು.
ಗಾಳಿಪಟ ಹಾರಾಟದಲ್ಲಿ 30 ವರ್ಷಗಳ ಅನುಭವ ಹೊಂರಿದುವ ಸ್ವೀಡನ್‌ನ ಆಂಡ್ರಿಯಾಸ್ ಆಗ್ರೆನ್ (75 ವರ್ಷ) ಅಲೆಗಳ ತೆರದಲ್ಲಿ ಹಾರಾಟ ನಡೆಸುವ ‘ಯಾಂಗಟ್ಝೆ’ಯಿಂದ ಹಿಡಿದು, ರೈಲಿನಂತೆ ಚಲಿಸುವ ‘ನ್ಯೋಮನ್ ಶಿಮ್ಮಿ’ಯವರೆಗೆ ಬಗೆಬಗೆಯ ಗಾಳಿಪಟಗಳನ್ನು ಹಾರಿಸಿದರು. ‘ನ್ಯೋಮನ್ ಶಿಮ್ಮಿ’ ಗಾಳಿಪಟವು 35 ಘಟಕಗಳನ್ನು ಹೊಂದಿದೆ.
ಇಂಗ್ಲೆಂಡ್‌ನ ಅಕ್ಟೋಪಸ್ ಗಾಳಿಪಟ ತಂಡದ ಕ್ಲೇರ್ ಮತ್ತು ಡೇವ್ ಹಾರ್ಡ್ವಿಕ್ ದಂಪತಿ ‘ಹೂಂಜ’ (ರೂಸ್ಟರ್ ) ಗಾಳಿಪಟದೊಂದಿಗೆ ಮೊದಲ ಸಲ ಮಂಗಳೂರಿಗೆ ಬಂದಿದ್ದರು. ಕಾಕತಾಳೀಯ ಎಂದರೆ ಈ ಗಾಳಿಪಟ ಉತ್ಸವದ ಲಾಂಚನ ಕೂಡ ತುಳುವಿನ ಹೂಂಜ ‘ಉರಿಯೆ’.
ಪತ್ನಿ ಸ್ಯಾಂಡ್ರಾ ಘೆನೊ ಜೊತೆ ಉತ್ಸವದಲ್ಲಿ ಭಾಗವಹಿಸಿರುವ ಇಟಲಿಯ ಗಿಲ್ಹರ್ಮೆ ಲಿನರೆಸ್, 50 ಮೀ ಉದ್ದದ ‘ಪಿನೋಚಿಯೊ‘ ಗಾಳಿಪಟ, ಸೂರ್ಯಕಾಂತಿ, ಸೀಗಲ್ ಹಕ್ಕಿ ಮೊದಲಾದ ಗಾಳಿಪಟಗಳನ್ನು ಹಾರಿಸಿದರು.
ಇಂಡೋನೇಷ್ಯಾದ ಮುನಾ ದ್ವೀಪದ ಸುಹಾರ್ಮಿನ್ ಡ್ರ್ಯಾಗನ್ ಗಾಳಿಪಟ ಹಾರಿಸಿದರು. ಎಲೆಗಳಿಂದಲೇ ತಯಾರಿಸುವ, ಬಾಲವಿಲ್ಲದೆಯೇ ಹಾರುವ ವಿಶಿಷ್ಟ ಗಾಳಿಪಟಗಳಿಗೆ ಈ ದ್ವೀಪ ಹೆಸರುವಾಸಿ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಾಳಿಪಟ ಉತ್ಸವ ಉದ್ಘಾಟಿಸಿದರು.
ಮೇಯರ್ ಮನೋಜ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಎಂಆರ್ ಪಿಎಲ್ ನಿರ್ದೇಶಕ ನಂದಕುಮಾರ್, ಟೀಮ್ ಮಂಗಳೂರಿನ ಸರ್ವೇಶ್ ರಾವ್ ಮತ್ತಿತರರು ಭಾಗವಹಿಸಿದ್ದರು.
ಈ ಗಾಳಿಪಟ ಉತ್ಸವ ಭಾನುವಾರ ಸಂಪನ್ನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.