ADVERTISEMENT

ಕಾಸರಗೋಡಿನಲ್ಲಿ ಟಾಟಾ ಕೋವಿಡ್ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:50 IST
Last Updated 10 ಸೆಪ್ಟೆಂಬರ್ 2020, 2:50 IST
ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದರು.   

ಮಂಗಳೂರು: ಖಾಸಗಿ ಸಹಭಾಗಿತ್ವ ಫಲದಾಯಕ ಎಂಬುದಕ್ಕೆ ಟಾಟಾ ಕೋವಿಡ್‌ ಆಸ್ಪತ್ರೆಯು ಮಾದರಿಯಾಗಿದೆ. ಇಲ್ಲಿ ಕೋವಿಡ್ ಮಹಾಮಾರಿಯ ಅವಧಿಯಲ್ಲಿ ನಾಡಿನ ಅಗತ್ಯ ಅರಿತು ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ಕೇರಳಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.

ಚೆಮ್ನಾಡ್ ಗ್ರಾಮ ಪಂಚಾಯಿತಿಯ ಚಟ್ಟಂಚಾಲ್‌ನಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸಿರುವ ಕೋವಿಡ್‌–19 ಆಸ್ಪತ್ರೆಯ ಹಸ್ತಾಂತರ ಪ್ರಕ್ರಿಯೆಯನ್ನು ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸೋಂಕಿನ ಉಲ್ಬಣಾವಸ್ಥೆಯಲ್ಲಿ ಟಾಟಾ ಸಮೂಹ ಸಂಸ್ಥೆ, ಟಾಟಾ ಟ್ರಸ್ಟ್ ಜೊತೆಗೆ ಕೈಜೋಡಿಸಿ ಆಸ್ಪತ್ರೆ ನಿರ್ಮಿಸಿದೆ. ಕಾಸರಗೋಡಿನ ವಿಶೇಷ ಪರಿಸ್ಥಿತಿಯನ್ನು ಗಮನಿಸಿ, ಇಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿತ್ತು. ವಾರದಲ್ಲಿಯೇ 5 ಎಕರೆ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಒದಗಿಸಿದ್ದು, ಸರಿಯಾದ ಸಮಯದಲ್ಲಿ ಸುಸಜ್ಜಿತ ಆಸ್ಪತ್ರೆಯೂ ನಿರ್ಮಾಣಗೊಂಡಿದೆ ಎಂದರು.

ADVERTISEMENT

ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮುಖ್ಯ ಅತಿಥಿಯಾಗಿದ್ದರು. ಟಾಟಾ ಯೋಜನೆ ನಿಗಮದ ಡಿ.ಜಿ.ಎಂ.ಗೋಪಿನಾಥ್ ರೆಡ್ಡಿ ಅವರು, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಆಸ್ಪತ್ರೆಯ ಕೀಲಿಕೈ ಹಸ್ತಾಂತರಿಸಿದರು.

3 ವಲಯ; 551 ಹಾಸಿಗೆ

ಟಾಟಾ ಕೋವಿಡ್ ಆಸ್ಪತ್ರೆ ಉಳಿದ ಚಿಕಿತ್ಸಾಲಯಗಳಿಗಿಂತ ಭೌತಿಕವಾಗಿ ಭಿನ್ನವಾಗಿದೆ. 3 ವಲಯಗಳಾಗಿ ವಿಂಗಡಣೆ ಮಾಡಲಾಗಿದೆ.

ಮೊದಲನೇ ವಲಯದಲ್ಲಿ ಕ್ವಾರಂಟೈನ್ ಸೌಲಭ್ಯಗಳು, ಎರಡನೇ ವಲಯದಲ್ಲಿ ಕೋವಿಡ್ ದೃಢಪಟ್ಟ ರೋಗಿಗಳ ದಾಖಲಾತಿ, ಮೂರನೇ ವಲಯದಲ್ಲಿ ಪ್ರತ್ಯೇಕ ಐಸೋಲೇಷನ್ ಸೇರಿದಂತೆ ವಿವಿಧ ಸೌಲಭ್ಯಗಳು ಇವೆ. ಒಂದು ಮತ್ತು ಮೂರನೇ ವಲಯದ ಒಂದೊಂದು ಕಂಟೈನರ್‌ಗಳಲ್ಲಿ ತಲಾ 5 ಹಾಸಿಗೆ, ಒಂದು ಶೌಚಾಲಯಗಳಿದ್ದು, 126 ಕಂಟೈನರ್‌ಗಳಲ್ಲಿ ಒಟ್ಟು 551 ಹಾಸಿಗೆಗಳು ಲಭ್ಯವಾಗಿವೆ.

ತೆಕ್ಕಿಲ್ ಗ್ರಾಮದ 5 ಎಕರೆ ಜಾಗದಲ್ಲಿ ರಸ್ತೆ, ಸ್ವಾಗತ ಸೌಲಭ್ಯ, ಕ್ಯಾಂಟೀನ್, ವೈದ್ಯರಿಗೆ, ದಾದಿಯರಿಗೆ ಪ್ರತ್ಯೇಕ ಕೊಠಡಿಗಳು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. 1.25 ಲಕ್ಷ ಲೀಟರ್‌ ನೀರು ಸಂಗ್ರಹಿಸುವ ಟ್ಯಾಂಕ್‌, ಶೌಚಾಲಯಗಳ ತ್ಯಾಜ್ಯ ಸಂಸ್ಕರಣೆಗೆ 63 ಬಯೋ ಡೈಜೆಸ್ಟರ್ಸ್‌, 8 ಓವರ್ ಹೆಡ್‌ ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.