ಪುತ್ತೂರು: ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಯ ಕೆಲವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನು ಶಿಕ್ಷಣ ಇಲಾಖೆಯು ಹೆಚ್ಚುವರಿ ಎಂದು ಗುರುತಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ ಬೆನ್ನಲ್ಲೇ ಕೆಲವು ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಮಕ್ಕಳ ಪೋಷಕರು ಪ್ರತಿಭಟನೆಗಿಳಿದಿದ್ದಾರೆ.
ಕೊಡಿಪ್ಪಾಡಿ, ಇರ್ದೆ ಗ್ರಾಮದ ಪೇರಲ್ತಡ್ಕ ಶಾಲೆಯ ಬಳಿಕ ಶಾಂತಿಗೋಡು ಗ್ರಾಮದ ಆನಡ್ಕ ಶಾಲೆಯಲ್ಲೂ ಎಸ್‌ಡಿಎಂಸಿ ಮತ್ತು ಮಕ್ಕಳ ಪೋಷಕರಿಂದ ಶಿಕ್ಷಕಿಯ ವರ್ಗಾವಣೆಗೆ ವಿರೋಧ ವ್ಯಕ್ತವಾಗಿದೆ.
ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 72 ವಿದ್ಯಾರ್ಥಿಗಳಿದ್ದು, 4 ಮಂದಿ ಶಿಕ್ಷಕರು ಇದ್ದಾರೆ. ಈ ಪೈಕಿ ಆಂಗ್ಲ ಭಾಷಾ ಶಿಕ್ಷಕಿ ಮಾಲತಿ ಅವರನ್ನು ಶಿಕ್ಷಣ ಇಲಾಖೆ ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾವಣೆಗೆ ಆದೇಶ ಮಾಡಿರುವುದನ್ನು ಪೋಷಕರು ಖಂಡಿಸಿದರು. ಪೋಷಕರು ಶನಿವಾರ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಶಾಲಾ ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಎಸ್‌ಡಿಎಂಸು ಅಧ್ಯಕ್ಷ ಹರೀಶ್ ಬಿರ್ಮನಕಜೆ, ನರಿಮೊಗರು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಮಜಲು, ಎಸ್ಡಿಎಂಸಿ ಉಪಾಧ್ಯಕ್ಷೆ ಸುಜಾತ, ಹಿರಿಯ ವಿದ್ಯಾರ್ಥು ಸಂಘದ ಅಧ್ಯಕ್ಷ ಸುರೇಶ್ ಪ್ರತಿಭಟನೆಯಲ್ಲಿದ್ದರು. ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು, ಸಮಿತಿ ಸದಸ್ಯೆ ಸೀತಾ ಅವರು ಶಾಲೆಗೆ ಭೇಟಿ ನೀಡಿದರು. ಶಾಸಕ ಮತ್ತು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.