ಉಳ್ಳಾಲ: ಮಂಜನಾಡಿ ಉರುಮಣೆಕೋಡಿ ನಡೆದಿದ್ದ ಭೂ ಕುಸಿತಕ್ಕೆ ಸಂಬಂಧಿಸಿ ತನಿಖಾ ತಂಡ ಭೇಟಿ ನೀಡಿ ಕಾಂಕ್ರೀಟಿಕರಣ ರಸ್ತೆ, ಮಣ್ಣು ಮತ್ತು ಕುಸಿತಗೊಂಡಿರುವ ಮನೆಯ ಸುತ್ತ ಪರಿಶೀಲನೆ ನಡೆಸಿತು.
ಭೂ ಕುಸಿತದಿಂದಾಗಿ ಎರಡು ಕಾಲುಗಳನ್ನು ಕಳೆದುಕೊಂಡಿರುವ ಅಶ್ವಿನಿ ಅವರಿಗೆ ಘಟನಾ ಸ್ಥಳಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಅಧಿಕಾರಿಗಳು, ಬುಧವಾರ ಗೈರಾಗಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದನ್ನು ಗಮನಿಸಿದ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು.
ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದ ತನಿಖಾಧಿಕಾರಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಯಪ್ರಕಾಶ್, ಉಳ್ಳಾಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್, ಜಿಲ್ಲಾ ಪಂಚಾಯಿತಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿತೇಶ್, ಪಿಡಿಒ ರಮ್ಯಾ ಒಳಗೊಂಡ ನಿಯೋಗವು ಮಧ್ಯಾಹ್ನ 2 ಗಂಟೆಯ ವೇಳೆ ಭೇಟಿ ನೀಡಿತು.
‘ಕಾಂಕ್ರೀಟಿಕರಣಗೊಂಡಿರುವ ರಸ್ತೆಯ ಆರಂಭದಿಂದ ಕೊನೆಯವರೆಗೆ, ದುರ್ಘಟನೆ ಸಂಭವಿಸಿದ ಮನೆಯವರೆಗೆ, ಮನೆಯ ಹಿಂಭಾಗದಿಂದ ಗುಡ್ಡ, ಮನೆ ಸಮೀಪದ ಹಳ್ಳದಿಂದ ಮನೆಯ ಹಿಂಭಾಗದ ಗುಡ್ಡದವರೆಗೆ ಅಳತೆ ಮಾಡಲಾಗಿದೆ. ವಸ್ತುನಿಷ್ಠ ವರದಿ ಕೊಡುವ ಪ್ರಯತ್ನ ಮಾಡುತ್ತೇನೆ. ಈ ಮನೆಯವರು 2013ರಲ್ಲಿ ಬಸವ ಕಲ್ಯಾಣ ಯೋಜನೆಯ ಫಲಾನುಭವಿಗಳು. ಆ ವೇಳೆ ಆರ್‌ಸಿಸಿ ಮನೆ ಕಟ್ಟಿದ್ದಾರೆ. ಅದರ ಹಿಂದೆ ಹೆಂಚಿನ ಮನೆಯ ಕುರಿತು ಮಾಹಿತಿಯಿಲ್ಲ. ಕಾಂಕ್ರೀಟಿಕರಣಕ್ಕೆ ಯಂತ್ರ ಬಳಸಿರುವುದು ಗುಡ್ಡದಲ್ಲಿ ಕಂಡ ಕುರುಹುಗಳಲ್ಲಿ ಗೋಚರಿಸುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.
ಅಶ್ವಿನಿ ಸಹೋದರ ಪವನ್, ಪತಿ ಸೀತಾರಾಮ, ಸಂಬಂಧಿ ಸುಮಲತಾ ಕೊಣಾಜೆ, ಬಿಜೆಪಿ ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಮುರಳೀಧರ್ ಕೊಣಾಜೆ, ಪುಷ್ಪರಾಜ್ ಹರೇಕಳ ಹಾಜರಿದ್ದರು.
ಮೇ 30ರಂದು ಸಂಭವಿಸಿದ ಭೂ ಕುಸಿತದಲ್ಲಿ ಮನೆಯ ಯಜಮಾನ ಕಾಂತಪ್ಪ ಪೂಜಾರಿ ಕಾಲು ತುಂಡಾಗಿತ್ತು, ಅವರ ಪತ್ನಿ ಪ್ರೇಮಾ, ಮೊಮ್ಮಕ್ಕಳಾದ ಆರ್ಯನ್, ಆರುಷ್ ಮೃತಪಟ್ಟಿದ್ದರು. ಈ ಮಕ್ಕಳ ತಾಯಿ ಅಶ್ವಿನಿ ಎರಡು ಕಾಲುಗಳನ್ನು ಕಳೆದುಕೊಂಡು ಜೀವನ ನಡೆಸುತ್ತಿದ್ದಾರೆ.
ಘಟನೆಗೆ ಮಳೆ ಮಾತ್ರ ಕಾರಣವಲ್ಲ, ಮನೆ ಮೇಲಿನ ಗುಡ್ಡ ಕಡಿದು ನಿರ್ಮಿಸಿದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯೂ ಕಾರಣವಾಗಿದೆ ಎಂದು ಕುಟುಂಬಸ್ಥರು ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದ್ದರು.
ಕುಸಿದುಬಿದ್ದ ಮನೆಯ ಅವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿ ಗುರುದತ್ ಅವರಲ್ಲಿ ಒತ್ತಾಯಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.