ADVERTISEMENT

ಮಂಗಳೂರು: ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರು; ಪಾಲಿಕೆ ಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 7:26 IST
Last Updated 29 ಅಕ್ಟೋಬರ್ 2022, 7:26 IST
ಮೇಯರ್ ಪೀಠದ ಎದುರು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು
ಮೇಯರ್ ಪೀಠದ ಎದುರು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು   

ಮಂಗಳೂರು: ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಅವರ ಹೆಸರನ್ನು ಇಡುವ ವಿಚಾರ ಪಾಲಿಕೆ ಸಭೆಯಲ್ಲಿ ಶನಿವಾರ ಗದ್ದಲಕ್ಕೆ ಕಾರಣವಾಯಿತು.

'ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರು ಇಡುವ ಪ್ರಸ್ತಾಪವನ್ನು ಈ ಹಿಂದಿನ ಪಾಲಿಕೆ ಸಭೆಯಲ್ಲಿ ಕೊನೆಯ ಕ್ಷಣದಲ್ಲಿ ಕಾರ್ಯಸೂಚಿಗೆ ಸೇರಿಸಲಾಗಿತ್ತು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ ಇಂದಿನ ಸಭೆಯಲ್ಲಿ ಆ ನಿರ್ಣಯವನ್ನು ಸ್ಥಿರೀಕರಿಸುವ ಮುನ್ನ ಕಾಂಗ್ರೆಸ್ ಪಕ್ಷದ ಆಕ್ಷೇಪವನ್ನು ದಾಖಲಿಸಬೇಕು' ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ನವೀನ್ ಡಿಸೋಜಾ ಒತ್ತಾಯಿಸಿದರು. ಇದಕ್ಕೆ

ಧ್ವನಿಗೂಡಿಸಿದ ಕಾಂಗ್ರೆಸ್ನ ಅಬ್ದುಲ್ ರವೂಫ್, 'ಅಭಿವೃದ್ಧಿಗೆ ಸಂಬಂಧಿಸಿದ ತುರ್ತು ವಿಚಾರಗಳನ್ನು ಮಾತ್ರ ಕೊನೆಯ ಕ್ಷಣದಲ್ಲಿ ಕಾರ್ಯಸೂಚಿಗೆ ಸೇರಿಸಿದರೆ ಒಪ್ಪಬಹುದು. ಇಂತಹ ವಿಚಾರಗಳನ್ನೆಲ್ಲ ಯಾಕೆ ಕೊನೆ ಕ್ಷಣದಲ್ಲಿ ಕಾರ್ಯ ಸೂಚಿಗೆ ಸೇರಿಸುತ್ತೀರಿ' ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಪಾಲಿಕೆಯ ಆಡಳಿತ ಪಕ್ಷದ ಸಚೇತಕ ಪ್ರೇಮಾನಂದ ಶೆಟ್ಟಿ, 'ಕಾಂಗ್ರೆಸ್ನವರು ಕಳೆದ ಸಭೆಯಲ್ಲಿ ಯಾವುದೇ ಆಕ್ಷೇಪ ದಾಖಲಿಸದೆ ಸುಮ್ಮನಿದ್ದರು. ಈಗ ಈ ವಿಷಯ ಸ್ಥಿರೀಕರಣಕ್ಕೆ ಬರುವಾಗ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ' ಎಂದರು.

ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಅವರು, 'ನೀವು ವಿರೋಧಿ ಮಾಡಿ, ಬಿಡಿ. ಸಾವರ್ಕರ್ ಹೆಸರನ್ನು ವೃತ್ತಕ್ಕೆ ಇಟ್ಟೇ ಇಡುತ್ತೇವೆ' ಎಂದರು.

ಆಕ್ಷೇಪ ದಾಖಲಿಸಲು ಮೇಯರ್ ಜಯಾನಂದ ಅವರು ಒಪ್ಪಂದ ಕಾರಣ, ಕಾಂಗ್ರೆಸ್ ಸದಸ್ಯರು ಮೇಯರ್ ಪೀಠದ ಎದುರು ಧರಣಿ ಆರಂಭಿಸಿದರು. ಬಳಿಕ ಮೇಯರ್ ಅವರು ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.

ಸಭೆ ಮತ್ತೆ ಆರಂಭವಾದಾಗ, ಮೇಯರ್, ಪ್ರತಿಪಕ್ಷ ದ ಎಲ್ಲ ಸದಸ್ಯರ ಆಕ್ಷೇಪವನ್ನು ದಾಖಲಿಸಿ ಪ್ರಸ್ತಾಪವನ್ನು ಅಂಗೀಕರಿಸುವುದಾಗಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.