ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ, ಮಹಾಮಂಡಲೇಶ್ವರ 1008 ಶ್ರೀ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುತ್ತಿರುವುದು.
ಬೆಳ್ತಂಗಡಿ: ‘ವಿದ್ಯಾ ಕೇಂದ್ರ, ಶ್ರದ್ಧಾ ಕೇಂದ್ರ ಎರಡು ಕಣ್ಣುಗಳಿದ್ದಂತೆ. ಬದುಕಿನಲ್ಲಿ ತ್ಯಾಗ ಬೇಕು. ತ್ಯಾಗದ ಮಹೋನ್ನತ ಸ್ಥಾನದಲ್ಲಿ ಜನಕಲ್ಯಾಣ, ಲೋಕಕಲ್ಯಾಣ ಮಾಡಿದಾಗ ಜೀವನದ ಭಾಗ್ಯೋದಯವಾಗುತ್ತದೆ. ಅದು ಸತ್ಯದೆಡೆಗೆ, ಧರ್ಮದೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ’ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮಂಗಳವಾರ ರಾತ್ರಿ ಲಾಯಿಲದ ರಾಘವೇಂದ್ರ ಸೇವಾ ಪ್ರತಿಷ್ಠಾನದಲ್ಲಿ ರಾಮಚಂದ್ರ ಮುಖ್ಯಪ್ರಾಣ ಸಹಿತ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಗುರು ಯಾಕೆ ಬೇಕು ಎಂಬ ಜಿಜ್ಞಾಸೆ ನಮಗೆ ಮೂಡುತ್ತದೆ. ಗುರು ತತ್ವ ಎಲ್ಲರಿಗೂ ಒಂದೇ. ನಮ್ಮಲ್ಲಿರುವ ಚೈತನ್ಯವನ್ನು ಒರೆಗೆ ಹಚ್ಚಬೇಕು. ಅದೇ ಜ್ಞಾನಯೋಗ, ಭಕ್ತಿಯೋಗವಾಗಿದೆ. ಭಗವಂತನೆಂಬ ಭಕ್ತಿಗೆ ನಾವು ಭಾಗಬೇಕು. ಅದಕ್ಕಾಗಿ ತ್ಯಾಗದಿಂದ ಕರ್ಮವನ್ನು ಮಾಡಬೇಕು’ ಎಂದರು.
‘ಚಿತ್ರನಟ ವಿಜಯ ರಾಘವೇಂದ್ರ ಮಾತನಾಡಿ, ಬೆಳ್ತಂಗಡಿಗೆ ಬಂದು ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯುತ್ತಿರುವುದು ನನ್ನ ಅದೃಷ್ಟ’ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿದ್ದರು.
ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಎಂ.ಜನಾರ್ದನ್, ಧರ್ಮದರ್ಶಿ ನಾರಾಯಣ ಬೇಗೂರು, ವಕೀಲ ಬಿ.ಕೆ.ಧನಂಜಯರಾವ್, ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಲಾಯಿಲ ಉದ್ಯಮಿ ಕೆ.ಎಂ. ನಾಗೇಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ, ಉಪಾಧ್ಯಕ್ಷ ಬಿ.ವಿಠಲ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಇದ್ದರು.
ಚಿತ್ರ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ ಸ್ವಾಗತಿಸಿದರು. ಜಯಾನಂದ ಲಾಯಿಲ ನಿರೂಪಿಸಿದರು.
ಶಿಲಾನ್ಯಾಸ 18ರಂದು
ಉತ್ತರ ಭಾರತದ ಸಾದು ಪರಂಪರೆ ದಕ್ಷಿಣ ಭಾರತದೊಂದಿಗೆ ಹೊಂದಿಕೊಳ್ಳುವುದು ಕಡಿಮೆ. ಅವರ ವಿದ್ವತ್‌ಗೆ ನಮ್ಮ ವಿದ್ವತ್ ಸಮಾನ ಎಂದನಿಸಿದರಷ್ಟೇ ನಮ್ಮನ್ನು ಸ್ವೀಕರಿಸುತ್ತಾರೆ. ಆ ಭಾಗ್ಯ ನಮಗೆ ಫಲಿಸಿದೆ. ಹೀಗಾಗಿ ನಮ್ಮ ಭಕ್ತರು ಉತ್ತರ ಭಾರತಕ್ಕೆ ಬಂದಾಗ ಅವರಿಗೆ ಆಶ್ರಯ ಒದಗಿಸುವ ಸಲುವಾಗಿ ಅಯೋಧ್ಯೆಯಲ್ಲಿ ₹10 ರಿಂದ ₹15 ಕೋಟಿ ವೆಚ್ಚದಲ್ಲಿ 40 ಕೊಠಡಿಯುಳ್ಳ ಆಶ್ರಯ ಕೊಠಡಿ ನಿರ್ಮಿಸುವ ಯೋಜನೆಯಿದೆ. ಮೇ 18 19ರಂದು ಭೂಮಿ ಪೂಜೆ ನಡೆಯಲಿದೆ ಎಂದು ಕನ್ಯಾಡಿ ಶ್ರೀಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.