ADVERTISEMENT

ಮಂಗಳೂರು: ಕಾವೂರು ಬಳಿ ಅಪಾಯಕಾರಿ ‘ವ್ಯಾಲಿ’

ಅಗಲ ಕಿರಿದಾದ, ಹೇರ್‌ ಪಿನ್ ತಿರುವುಗಳು ಇರುವ ರಸ್ತೆಯ ಇಕ್ಕೆಲಗಳಲ್ಲಿ ಮನೆಗಳ ಸಾಲು

ವಿಕ್ರಂ ಕಾಂತಿಕೆರೆ
Published 19 ಮಾರ್ಚ್ 2024, 5:48 IST
Last Updated 19 ಮಾರ್ಚ್ 2024, 5:48 IST
ಪಿಂಟೊ ವ್ಯಾಲಿ ಬಡಾವಣೆಯ ಕಿರಿದಾದ ರಸ್ತೆಯ ಇಳಿಜಾರು ಪ್ರದೇಶ
ಪಿಂಟೊ ವ್ಯಾಲಿ ಬಡಾವಣೆಯ ಕಿರಿದಾದ ರಸ್ತೆಯ ಇಳಿಜಾರು ಪ್ರದೇಶ   

ಮಂಗಳೂರು: ಮೇಲೆ ಸಮತಟ್ಟಾದ ಪ್ರದೇಶ. ಕೆಳಗೆ ತೋಟ, ಮನೆಗಳನ್ನು ಒಳಗೊಂಡ ಮಟ್ಟಸ ಭೂಪ್ರದೇಶ. ಇವೆರಡರ ನಡುವೆ ಸುಮಾರು ಮುಕ್ಕಾಲು ಕಿಲೊಮೀಟರ್ ರಸ್ತೆಯಲ್ಲಿ ದುಸ್ತರ ಸಂಚಾರ.

ಕಾವೂರು ಸಮೀಪದ ಪಿಂಟೊ ವ್ಯಾಲಿ ಎಂಬ ಈ ಬಡಾವಣೆಯ ಗುಡ್ಡದ ಮೇಲೆ ಹತ್ತಾರು ಮನೆಗಳು ನಿರ್ಮಾಣವಾಗಿವೆ. ಇವುಗಳ ಮಧ್ಯದಲ್ಲಿ ಹಾದು ಹೋಗಿರುವ ‘ವ್ಯಾಲಿ’ ಅಕ್ಷರಶಃ ಕಣಿವೆಯ ಹಾಗೆಯೇ ಇದೆ. ಪ್ರಯಾಸಪಟ್ಟು ವಾಹನ ಚಲಾಯಿಸುವ ಜನರು ಇಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೂ ಕೆಳಗೆ ಉರುಳಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. 

ಪಿಂಟೊ ವ್ಯಾಲಿ ಹಳೆಯ ಬಡಾವಣೆ. ಸಮೀಪದಲ್ಲಿರುವ ‘ಕೆಎಸ್‌ಇಬಿ ಕಾಲೊನಿ’ಯಲ್ಲಿ ಆರಂಭದಲ್ಲಿ ವಾಸಕ್ಕೆ ಬಂದವರು ಹೇಳುವ ಪ್ರಕಾರ ಕೆಲವು ವರ್ಷಗಳ ಹಿಂದೆ ಈ ವ್ಯಾಲಿಯಲ್ಲಿ ಜನಸಂಚಾರ ಅಪರೂಪವಾಗಿತ್ತು. ಅಲ್ಲೊಂದು ಇಲ್ಲೊಂದು ಮನೆ ಬಿಟ್ಟರೆ ಜನವಾಸ ತೀರಾ ಕಡಿಮೆಯಾಗಿತ್ತು. ಮೂರು– ನಾಲ್ಕು ವರ್ಷಗಳ ಈಚೆಗೆ ಈ ಭಾಗದಲ್ಲಿ ಮನೆಗಳು ನಿರ್ಮಾಣ ಆಗಲು ಶುರುವಾದವು. ಕಾವೂರು ಕೆರೆ ಅಭಿವೃದ್ಧಿಪಡಿಸಿದ ನಂತರ ಈ ಪ್ರದೇಶವೂ ಅಭಿವೃದ್ಧಿ ಆಯಿತು.

ADVERTISEMENT

‘ಕೆರೆ ಅಭಿವೃದ್ಧಿಯಾಗಿ ವಾಕಿಂಗ್ ಪಾಥ್ ಮತ್ತಿತರ ಸೌಲಭ್ಯಗಳು ಉಂಟಾದ ನಂತರ ಇಲ್ಲಿ ಜನವಾಸ ಹೆಚ್ಚಾಯಿತು. ಹೀಗಾಗಿ ಮನೆಗಳ ಸಂಖ್ಯೆಯೂ ಹೆಚ್ಚಿತು. ಮೇಲ್ಭಾಗದಲ್ಲಿ ಮಹಾತ್ಮ ಗಾಂಧಿ ಕಾಲೊನಿ ಬೆಳೆದ ನಂತರ ಈ ರಸ್ತೆಯಲ್ಲಿ ವಾಹನಗಳ ಓಡಾಟವೂ ಅಧಿಕವಾಯಿತು. ಘಾಟಿ ಪ್ರದೇಶಗಳಲ್ಲಿ ಕಾಣಸಿಗುವಂತಹ ರಸ್ತೆ ಇದು. ಇಲ್ಲಿ ವಾಹನಗಳು ಓಡಾಡುವುದು ನೋಡುವಾಗ ಮೈ ಜುಮ್ಮೆನ್ನುತ್ತದೆ’ ಎಂದು ಆತಂಕದಿಂದ ಹೇಳಿದರು ಸುಧಾಕರ ಪೈ.

ವಿಮಾನ ನಿಲ್ದಾಣ ರಸ್ತೆಯ ಬದಿಯಲ್ಲಿರುವ ಕಾವೂರು ಕೆರೆಯನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಪಿಂಟೊ ವ್ಯಾಲಿಯ ‘ಪಾದ’ ಸಿಗುತ್ತದೆ. ಅಲ್ಲಿಂದ ಏಕಾಏಕಿ ಏರು. ನಿರಂತರ ಏರುತ್ತಲೇ ಹೋಗುವ ರಸ್ತೆ ಕೆಎಸ್‌ಇಬಿ ಕಾಲೊನಿ ಮತ್ತು ಮಹಾತ್ಮ ಗಾಂಧಿ ನಗರಕ್ಕೆ ಹೋಗುವ ದಾರಿಗಳು ಕವಲೊಡೆಯುವಲ್ಲಿ ಸಮತಟ್ಟಾಗುವುತ್ತದೆ. ಅಷ್ಟರಲ್ಲಿ ಒಂದು ಸಾಮಾನ್ಯ ತಿರುವು ಮತ್ತೊಂದು ಹೇರ್‌ ಪಿನ್ ತಿರುವು ಇದೆ. ನಾಲ್ಕು ಚಕ್ರದ ವಾಹನ ಏರುತ್ತ ಅಥವಾ ಇಳಿಯುತ್ತ ಸಾಗುವಾಗ ಎದುರಿನಿಂದ ನಾಲ್ಕು ಚಕ್ರದ ಮತ್ತೊಂದು ವಾಹನ ಬಂದರೆ ಫಜೀತಿ. ಏರುತ್ತ ರಿವರ್ಸ್‌ ಹೋಗುವುದು ಮತ್ತು ಇಳಿಯುತ್ತ ರಿವರ್ಸ್ ಹೋಗುವುದು ಎರಡೂ ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ.

ಹೇರ್ ಪಿನ್ ತಿರುವು ಇರುವಲ್ಲಿ ಒಂದು ಭಾಗ ಪ್ರಪಾತದಂತಿದ್ದು ಮತ್ತೊಂದು ಭಾಗದಲ್ಲಿ ‘ಮೂಲೆ ಮನೆ’ ಇದೆ. ಈ ಮನೆಯ ಗೋಡೆ ಅಡ್ಡವಾಗುವುದರಿಂದ ಎದುರಿನ ದಾರಿ ಒಂದಿನಿತೂ ಕಾಣದೆ ‘ಬ್ಲೈಂಡ್ ಸ್ಪಾಟ್‌’ ಆಗಿ ಈ ಭಾಗ ಮಾರ್ಪಟ್ಟಿದೆ. ಇಲ್ಲಿ ತ್ರಿ–ಡಿ ಮಾದರಿಯಲ್ಲಿ ರಸ್ತೆ ಗೋಚರವಾಗುವ ಕನ್ವೆಕ್ಸ್ ಲೆನ್ಸ್ ಅಳವಡಿಸಬೇಕು ಎಂಬ ಆಗ್ರಹವನ್ನು ಸ್ಥಳೀಯರು ವ್ಯಕ್ತಪಡಿದ್ದಾರೆ.

‘ಇಲ್ಲಿ ಹತ್ತುವಾಗ ಅಥವಾ ಇಳಿಯುವಾಗ ನಿಯಂತ್ರಣ ತಪ್ಪಿದರೆ ಅಥವಾ ವಾಹನಗಳೇನಾದರೂ ಕೆಟ್ಟರೆ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದನ್ನು ತಪ್ಪಿಸಲು ಏನಾದರೂ ಕ್ರಮ ಕೈಗೊಳ್ಳಬೇಕು. ನಿತ್ಯದ ಸಂಚಾರ ಸಂಕಷ್ಟವನ್ನು ಇಲ್ಲದಾಗಿಸಲು ರಸ್ತೆ ಅಗಲಗೊಳಿಸುವುವುದು, ಕನ್ವೆಕ್ಸ್ ಲೆನ್ಸ್ ಅಳವಡಿಸುವುದು ಮತ್ತಿತರ ಕಾರ್ಯಗಳನ್ನು ಮಾಡಬೇಕು’ ಎಂದು ನಿವಾಸಿಯೊಬ್ಬರು ಆಗ್ರಹಿಸಿದರು.

ಪಿಂಟೊ ವ್ಯಾಲಿ ರಸ್ತೆಯ ‘ಬ್ಲೈಂಡ್ ಸ್ಪಾಟ್’ ಅಪಾಯಕಾರಿಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.