ADVERTISEMENT

ಬೆದರಿಕೆ: ಪೊಲೀಸ್ ರಕ್ಷಣೆಗೆ ಮನವಿ– ಐಜಿಪಿಗೆ ಮನವಿ ಸಲ್ಲಿಸಿದ ಸಂತ್ರಸ್ತ ಯುವತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:20 IST
Last Updated 12 ಆಗಸ್ಟ್ 2025, 7:20 IST
<div class="paragraphs"><p>ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ</p></div>

ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ

   

ಮಂಗಳೂರು: ತನಗೆ ಜೀವ ಬೆದರಿಕೆ ಇದ್ದು, ಪೊಲೀಸ್ ರಕ್ಷಣೆ ಒದಗಿಸುವಂತೆ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿರುವ ಸಂತ್ರಸ್ತ ಯುವತಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಸೋಮವಾರ ತಾಯಿ ಹಾಗೂ ಚಿಕ್ಕ ಹಸುಳೆಯೊಂದಿಗೆ ಐಜಿಪಿ ಕಚೇರಿಗೆ ಬಂದಿದ್ದ ಸಂತ್ರಸ್ತ ಯುವತಿ, ‘ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಶ್ರೀಕೃಷ್ಣ ರಾವ್ ಮತ್ತು ನಾನು ಒಂದೇ ಊರಿನವರಾಗಿದ್ದು, 9ನೇ ತರಗತಿಯಿಂದ ಪ್ರೀತಿಸುತ್ತಿದ್ದೇವೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಆತ, ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಮಗು ಜನಿಸಿದೆ. ನಮ್ಮಿಬ್ಬರಿಗೂ ಮದುವೆ ಮಾಡಿಸುವುದಾಗಿ ಹೇಳಿದ್ದ ಆತನ ಮನೆಯವರು ನಂತರ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು. ದಾರಿ ಕಾಣದೆ, ಜೂನ್ 24ದಂಉ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದೆ’ ಎಂದು ತಿಳಿಸಿದರು.

ADVERTISEMENT

‘ಇತ್ತೀಚೆಗೆ ನಮ್ಮ ಮನೆ ಸುತ್ತಮುತ್ತ ರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಾರೆ. ಮಗುವಿಗೆ ಏನಾದರೂ ತೊಂದರೆ ಆದರೆ, ನನ್ನ ಜೀವನ ಮುಗಿದಂತೆ. ಹೀಗಾಗಿ, ನನಗೆ ಮತ್ತು ಮಗುವಿಗೆ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.

ತಾಯಿ, ಮಗಳ ಜೊತೆ ಬಂದಿದ್ದ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ, ‘ನಮ್ಮ ಮನವಿಗೆ ಐಜಿಪಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂತ್ರಸ್ತೆಯ ಮನೆಗೆ ಪೊಲೀಸ್ ರಕ್ಷಣೆ ಒದಗಿಸಲು ಸೂಚಿಸಿದ್ದಾರೆ. ಸಂತ್ರಸ್ತ ಯುವತಿ ಹೊರಗೆ ಹೋಗುವ ಸಂದರ್ಭದಲ್ಲೂ ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಈ ಸಂಬಂಧ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಜೊತೆ ಮಾತನಾಡಿದ್ದು, ಅವರು 15 ದಿನಗಳೊಳಗೆ ಕೃಷ್ಣ ರಾವ್ ಪಾಲಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಜೈಲಿಗೆ ಭೇಟಿ ನೀಡಿ ಶ್ರೀಕೃಷ್ಣ ರಾವ್‌ ಜತೆ ಮಾತನಾಡಿ ವಿವಾಹಕ್ಕೆ ಒಪ್ಪಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.

ಸಂತ್ರಸ್ತೆಯ ತಾಯಿ, ‘ಮಗುವಿನ ಹೊರತು, ಅತ್ಯಾಚಾರ ನಡೆದಿರುವ ಬಗ್ಗೆ ನಮ್ಮಲ್ಲಿ ಬೇರೆ ಸಾಕ್ಷಿಯಿಲ್ಲ‌. ಈ ಸಾಕ್ಷಿ ನಾಶಕ್ಕೆ ಯತ್ನ ನಡೆಯುತ್ತಿದೆ ಎಂಬ ಭಯವಿದೆ. ಶ್ರೀಕೃಷ್ಣ ರಾವ್ ಜೈಲಿನಲ್ಲಿ ಇರಬೇಕೆಂಬ ಉದ್ದೇಶ ನಮಗೆ ಇಲ್ಲ. ಅವನು‌ ನನ್ನ ಮಗಳನ್ನು ಮದುವೆಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.