ADVERTISEMENT

ಕರಾವಳಿಯ ಮೂರು ಜಿಲ್ಲೆಗೂ ತಲಾ ಒಂದು ಮತ್ಸ್ಯ ಗ್ರಾಮ: ರತ್ನಾಕರ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:50 IST
Last Updated 26 ಸೆಪ್ಟೆಂಬರ್ 2022, 15:50 IST
ಮಟ್ಟಾರು ರತ್ನಾಕರ ಹೆಗ್ಡೆ
ಮಟ್ಟಾರು ರತ್ನಾಕರ ಹೆಗ್ಡೆ   

ಮಂಗಳೂರು: ‘ಮತ್ಸ್ಯ ಸಂಪದ ಯೋಜನೆ ಅಡಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದು ಮತ್ಸ್ಯ ಗ್ರಾಮಗಳನ್ನು ಸ್ಥಾಪಿಸಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ’ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪ್ರತಿಯೊಂದು ಮತ್ಸ್ಯಗ್ರಾಮ ಯೋಜನೆಗೂ ತಲಾ ₹ 7.5 ಕೋಟಿ ಅನುದಾನ ಲಭ್ಯ. ಇದರಲ್ಲಿ ಶೇ 40ರಷ್ಟನ್ನು ರಾಜ್ಯ ಹಾಗೂ ಶೇ 60ರಷ್ಟನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಮತ್ಸ್ಯ ಗ್ರಾಮದಲ್ಲಿ ಹಸಿ ಮೀನು ಮಾರಾಟ ವ್ಯವಸ್ಥೆ, ಮೀನು ಒಣಗಿಸುವ ಸೌಕರ್ಯ, ಮಂಜುಗಡ್ಡೆ ಘಟಕ, ಉದ್ಯಾನ, ಬಲೆ ತಯಾರಿ ಘಟಕ, ಮೀನು ಶುಚಿಗೊಳಿಸುವುದಕ್ಕೆ ಪ್ರತ್ಯೇಕ ಜಾಗ, ವಿಶ್ರಾಂತಿ ಗೃಹ, ಮೀನಿನ ಖಾದ್ಯಗಳನ್ನು ಪೂರೈಸುವ ಹೋಟೆಲ್... ಮೊದಲಾದ ಸೌಕರ್ಯಗಳನ್ನು ಒದಗಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಸುರತ್ಕಲ್‌ನ ಸಸಿಹಿತ್ಲುವಿನಲ್ಲಿ 5 ಎಕರೆಯನ್ನು ಮತ್ಸ್ಯ ಗ್ರಾಮಕ್ಕೆ ಮಂಜೂರು ಮಾಡುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲೂ ಮತ್ಸ್ಯ ಗ್ರಾಮ ನಿರ್ಮಿಸಲು ಜಾಗ ಹುಡುಕುತ್ತಿದ್ದೇವೆ’ ಎಂದರು.

ADVERTISEMENT

‘ಆತ್ಮನಿರ್ಭರ ಯೋಜನೆಯಡಿ ಮಹಿಳೆಯರ ಸಬಲೀಕರಣಕ್ಕೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮೂಲಧನ ನೀಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಕೊಡಿಸುತ್ತೇವೆ. ಮೀನು ಖರೀದಿಸಿ ಮಾರಾಟ ಮಾಡಲು, ಮೀನು ಒಣಗಿಸುವ ಘಟಕ ಆರಂಭಿಸಲು ಸಾಲ ಪಡೆಯಬಹುದು. ತ್ರಿಚಕ್ರ ವಾಹನದಲ್ಲಿ ಶೀಥಲಯಂತರ ಅಳವಡಿಸಿ, ಅದನ್ನು ಮಹಿಳೆಯರೇ ಚಲಾಯಿಸಿಕೊಂಡು ಹೋಗಿ ಮೀನು ಮಾರಾಟ ಮಾಡುವ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಆರಂಭಿಸುವ ಚಿಂತನೆಯೂ ಇದೆ. ಇದಕ್ಕೆ ಸೌರಶಕ್ತಿಯನ್ನು ಅಥವಾ ವಿದ್ಯುತ್‌ ಅನ್ನು ಇಂಧನವಾಗಿ ಬಳಸುವ ವಾಹನವನ್ನೇ ಪೂರೈಸಬೇಕು ಎಂಬ ಷರತ್ತು ಇದೆ. ಇಂತಹ ವಾಹನಕ್ಕೆ ₹ 8 ಲಕ್ಷ ವೆಚ್ಚವಾಗುತ್ತದೆ’ ಎಂದರು.

‘ಮೀನಿನ ತ್ಯಾಜ್ಯವನ್ನು ಬಳಸಿ ಜೈವಿಕ ಅನಿಲ ತಯಾರಿಸುವ ಘಟಕವನ್ನು ಮತ್ಸ್ಯ ಸಂಪದ ಯೋಜನೆಯಡಿ ಆರಂಭಿಸುವ ಚಿಂತನೆಯೂ ಇದೆ. ಮಲ್ಪೆಯಲ್ಲಿ 5 ಎಕರೆಯನ್ನು ಮೀನು ಒಣಗಿಸುವ ಉದ್ದೇಶಕ್ಕೆ ಕಾಯ್ದಿರಿಸುವ ಉದ್ದೇಶವಿದ್ದು, ಬಂದರು ಇಲಾಖೆಗೆ ಸೇರಿದ ಜಾಗವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ಪ್ರಸ್ತಾವ ಸಿದ್ಧವಾಗಿವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯೆ ಕೇಸರಿ ಯುವರಾಜ್‌, ಸದಸ್ಯ ಕಾರ್ಯದರ್ಶಿ ಪ್ರದೀಪ್‌ ಡಿಸೋಜಾ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಪವನ್‌ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.