ADVERTISEMENT

ಮಂಗಳೂರು: ವಿಕಲಚೇತನರಿಗೆ 90 ತ್ರಿಚಕ್ರ ವಾಹನ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:04 IST
Last Updated 28 ಫೆಬ್ರುವರಿ 2026, 7:04 IST
ವಿಶೇಷ ಚೇತನರಿಗೆ ಯಾಂತ್ರಿಕ ತ್ರಿಚಕ್ರ ವಾಹನ ವಿತರಿಸಲಾಯಿತು
ವಿಶೇಷ ಚೇತನರಿಗೆ ಯಾಂತ್ರಿಕ ತ್ರಿಚಕ್ರ ವಾಹನ ವಿತರಿಸಲಾಯಿತು   

ಮಂಗಳೂರು: ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ  ಟಿ.ಎಂ ಶಾಹೀದ್ ತೆಕ್ಕಿಲ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು- ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಇವರ ಸಹಯೋಗದಲ್ಲಿ ಪದವಿನಂಗಡಿ ದೇವಿನಗರದಲ್ಲಿ ಶುಕ್ರವಾರ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚೇತನರಿಗೆ ವಿವಿಧ ಉದ್ಯೋಗದಾತರ ಪ್ರಾಯೋಜಿತ ಯಾಂತ್ರಿಕ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ ಮಾತನಾಡಿ, ವಿಕಲಚೇತನರು ಸಮಾಜದಲ್ಲಿ ಮುಕ್ತವಾಗಿ ಸಂಚರಿಸಲು ಅವರಿಗೆ ತ್ರಿಚಕ್ರ ವಾಹನ ನೀಡುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಕೈಜೋಡಿಸಿದ ವಿವಿಧ ಉದ್ಯಮ, ಕೈಗಾರಿಕೆಗಳನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.

ADVERTISEMENT

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಹೊರಗುತ್ತಿಗೆಯಲ್ಲಿರುವ ಮಹಿಳಾ ನೌಕರರಿಗೆ ಹೊರಗುತ್ತಿಗೆ ಸಂಸ್ಥೆಗಳು ಮಾತೃತ್ವ ರಜೆ ಹಾಗೂ ಋತುಚಕ್ರ ರಜೆಯನ್ನು ನೀಡಲು ನಿರಾಕರಿಸುತ್ತಿರುವ ಪ್ರಕರಣಗಳು ಕಂಡುಬಂದಿದ್ದು,  ಅಂತಹ ಏಜೆನ್ಸಿಗಳ ವಿರುದ್ಧ ಕಾರ್ಮಿಕ ಇಲಾಖೆ  ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಕೊಂಕಣಿ ಅಕಾಡೆಮಿ ಅಧ್ಯಕ್ಷ  ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್,  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಎಂ.ಆರ್.ಪಿ.ಎಲ್ ಆಡಳಿತ ಸಿಜಿಎಂ ಪ್ರಶಾಂತ್ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಮಿಕ ಅಧಿಕಾರಿ ಕುಮಾರ್ ಸ್ವಾಗತಿಸಿದರು.  ವಿಲ್ಮಾ ಎಲಿಜಬೆತ್  ವಂದಿಸಿದರು. 

90  ತ್ರಿಚಕ್ರ ಸ್ಕೂಟರ್ ವಿತರಿಸಲಾಯಿತು. ಎಂ.ಆರ್.ಪಿ.ಎಲ್-50, ಎಂ.ಸಿ.ಎಫ್-27, ಬಿ.ಎಸ್.ಎಫ್-5, ಯೆನೆಪೊಯ ವಿಶ್ವವಿದ್ಯಾಲಯ-3, ಅರವಿಂದ್, ಮಾಂಡೋವಿ, ಕ್ಯಾಂಪ್ಕೀ, ಇನ್ವೆಂಜರ್ ಟೆಕ್ನಾಲಜಿ ಸಂಸ್ಥೆಗಳು ತಲಾ ಒಂದು ತ್ರಿಚಕ್ರ ವಾಹನಗಳನ್ನು ಪ್ರಾಯೋಜಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.