ADVERTISEMENT

ಸಸಿಹಿತ್ಲು: ‘ಇಕೊ ಟೂರಿಸಂ’ಗೆ ಯೋಜನೆ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 15:46 IST
Last Updated 27 ಸೆಪ್ಟೆಂಬರ್ 2022, 15:46 IST
ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಬಲೂನು ಹಾರಿಸುವ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಬಲೂನು ಹಾರಿಸುವ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.   

ಮಂಗಳೂರು: ಸಸಿಹಿತ್ಲುವಿನಲ್ಲಿರುವ 29 ಎಕರೆ ಡೀಮ್ಡ್ ಅರಣ್ಯ ಸದ್ಬಳಕೆ ಮಾಡಿಕೊಂಡು ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ, ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮಂಗಳವಾರ ತಣ್ಣೀರುಬಾವಿ ಕಡಲ ತೀರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಬ್ಲೂ ಫ್ಲ್ಯಾಗ್ ಬೀಚ್‌ ಮಾನ್ಯತೆ ಪಡೆಯಲು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋಸ್ಟಲ್‌ ಝೋನ್ ಮ್ಯಾನೇಜ್‌ಮೆಂಟ್ ಪ್ಲಾನ್‌ಗೆ ಅನುಮೋದನೆ ದೊರೆತಿದ್ದು, ಇದು ಕಡಲತೀರದ ಅಭಿವೃದ್ಧಿಯ ಜತೆಗೆ, ತೀರದ ನಿವಾಸಿಗಳ ಆದಾಯ ಹೆಚ್ಚಳಕ್ಕೆ ಹೇರಳ ಅವಕಾಶದ ಬಾಗಿಲನ್ನು ತೆರೆಯಲಿದೆ ಎಂದರು.

ಸಸಿಹಿತ್ಲು ಸರ್ಫಿಂಗ್‌ಗೆ ಪ್ರಸಿದ್ಧವಾಗಿದ್ದು, ಸರ್ಫಿಂಗ್ ಸ್ಕೂಲ್ ನಡೆಯುತ್ತಿದೆ. ನಂದಿನಿ, ಶಾಂಭವಿ ನದಿಗಳು ಸಮುದ್ರ ಸೇರುವ ಸಂಗಮವು ವಾಟರ್ ಸ್ಪೋರ್ಟ್ಸ್‌ಗೆ ಸೂಕ್ತ ಸ್ಥಳವಾಗಿದೆ. ಇಂತಹ ಅವಕಾಶಗಳನ್ನು ಬಳಸಿಕೊಂಡು, ಜಂಗಲ್‌ ಲಾಡ್ಜ್‌ಗೆ ಪ್ರವಾಸಿಗರನ್ನು ಆಕರ್ಷಿಸಲಾಗುವುದು. ಜಿಲ್ಲೆಯ ಕಲೆ, ಸಂಸ್ಕೃತಿ ಪ್ರಚುರಪಡಿಸುವ ನಿಟ್ಟಿನಲ್ಲಿ ಯಕ್ಷಗಾನ, ನೃತ್ಯ ಪ್ರದರ್ಶನ, ಪಕ್ಷಿ ವೀಕ್ಷಣೆ, ಕುದ್ರುವಿನಲ್ಲಿರುವ ಕಾಂಡ್ಲಾವನ ವೈವಿಧ್ಯ, ಸಾಂಪ್ರದಾಯಿಕ ಮೀನುಗಾರಿಕೆ ಒಳಗೊಂಡ ಪ್ಯಾಕೇಜ್‌ ಅನ್ನು ರೂಪಿಸಲು ಯೋಚಿಸಲಾಗಿದೆ ಎಂದರು.

ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಡಲತೀರದಲ್ಲಿ ಸುರಕ್ಷಿತ ಸ್ಥಳದ ಆಯ್ಕೆ ಮಹತ್ವದ್ದಾಗಿದೆ. ಇಂತಹ ಸ್ಥಳಗಳನ್ನು ಅಭಿವೃದ್ಧಿಗೊಳಿಸುವ ಭಾಗವಾಗಿ ಪಣಂಬೂರು ಬೀಚ್‌ನಲ್ಲಿ, ಮೂಲ ಸೌಲಭ್ಯ ಹೆಚ್ಚಿಸಲು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಷಿಪ್) ಮಾದರಿ ಅನುಷ್ಠಾನಕ್ಕೆ ಟೆಂಡರ್‌ ಕರೆಯಲಾಗಿದ್ದು, ಇನ್ನು 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇಲ್ಲಿನ ಯಶಸ್ಸನ್ನು ಆಧರಿಸಿ, ಸುರತ್ಕಲ್, ಇಡ್ಯಾ ಬೀಚ್‌ಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು. ವಾಟರ್‌ ಸ್ಪೋರ್ಟ್ಸ್‌ಗಳಿಗೆ ನೆರೆಯ ಜಿಲ್ಲೆಗಳಿಗೆ ಹೆಚ್ಚು ಪ್ರವಾಸಿಗರು ಹೋಗುವುದನ್ನು ಗಮನಿಸಿ, ಇಲ್ಲಿ ಕೂಡ ಭಿನ್ನ ಮಾದರಿಯ ವಾಟರ್‌ ಸ್ಪೋರ್ಟ್ಸ್‌ ತರಲು ಯೋಚಿಸಲಾಗಿದೆ ಎಂದು ವಿವರಿಸಿದರು.

ಸೀ–ಲಿಂಕ್ ಯೋಜನೆ: ಸ್ಮಾರ್ಟ್ ಸಿಟಿ ಅಡಿಯಲ್ಲಿ ಸೀ–ಲಿಂಕ್ ಯೋಜನೆ ರೂಪಿಸಲಾಗಿದ್ದು, ಇದು ಅನುಷ್ಠಾನಗೊಂಡರೆ, ತಣ್ಣೀರುಬಾವಿ ಬೀಚ್‌ಗೆ ನಗರದ ಜನರು ವಾಕಿಂಗ್ ಬರಬಹುದು. ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗದಂತೆ ಕುಟುಂಬಸಮೇತ ರಾತ್ರಿ ವೇಳೆ ಕಡಲ ತೀರದ ಸೌಂದರ್ಯ ಆಸ್ವಾದಿಸಲು ವ್ಯವಸ್ಥೆಗೊಳಿಸುವ ಕುರಿತು ಸಹ ಯೋಚಿಸಲಾಗಿದೆ ಎಂದು ತಿಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉದ್ಘಾಟಿಸಿದರು. ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಎಫ್ ದಿನೇಶ್‌ಕುಮಾರ್ ವೈಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ ಸ್ವಾಗತಿಸಿದರು. ಯಕ್ಷಗಾನ ಮುಖವರ್ಣಿಕೆಯ ಮರಳುಶಿಲ್ಪ, ಗಾಳಿಪಟ ಪ್ರದರ್ಶನ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.