ADVERTISEMENT

ಸುಬ್ರಹ್ಮಣ್ಯ: ಯುವಕನ ಮೇಲೆ ಖಾಸಗಿ ಏಜೆಂಟ್‌ಗಳಿಂದ ಹಲ್ಲೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 3:56 IST
Last Updated 11 ಜೂನ್ 2025, 3:56 IST

ಸುಬ್ರಹ್ಮಣ್ಯ: ‘ಇಲ್ಲಿನ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ವಸತಿಗೃಹದ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸ್ಪಷ್ಟನೆ ನೀಡಿದ್ದು, ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕೃತ ವಸತಿಗೃಹದ ನಿರ್ವಾಹಕರಿಂದ ಹಲ್ಲೆ ನಡೆದಿಲ್ಲ’ ಎಂದು ತಿಳಿಸಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿರುವುದು ಖಾಸಗಿ ವಸತಿಗೃಹಗಳ ಏಜೆಂಟ್‌ಗಳು ಎಂದು ತಿಳಿದುಬಂದಿದ್ದು, ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ವಸತಿಗೃಹಗಳಲ್ಲಿ ತಂಗುವ ಗ್ರಾಹಕರನ್ನು ಸೆಳೆಯುವ ಖಾಸಗಿ ವಸತಿಗೃಹಗಳ ಏಜೆಂಟ್‌ಗಳು ತಮ್ಮ ವ್ಯವಹಾರದ ನಿಮಿತ್ತ ಯಾತ್ರಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಇದಾಗಿದೆ. ಅನಧಿಕೃತ ವಸತಿಗೃಹ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ಭದ್ರತೆ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಯಾತ್ರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ.

ಮುಂದಿನ ದಿನಗಳಲ್ಲಿ ಕ್ಷೇತ್ರದ ವತಿಯಿಂದ 1 ಸಾವಿರದಷ್ಟು ಕೊಠಡಿಗಳ ವಸತಿಗೃಹ ನಿರ್ಮಾಣಗೊಂಡು ಭಕ್ತರಿಗೆ ಮಿತ ದರದಲ್ಲಿ ಕೊಠಡಿಗಳು ಲಭ್ಯವಾಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.

ADVERTISEMENT

ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಖಾಸಗಿ ವಸತಿಗೃಹ ಪಡೆಯಲು ಬಂದ ಯುವಕ ವಸತಿ ವೀಕ್ಷಿಸಿ ಬಳಿಕ ವಸತಿ ಪಡೆಯದೇ ತೆರಳಿದ್ದರಿಂದ ಅಸಮಾಧಾನಗೊಂಡ ಲಾಡ್ಜ್ ಏಜೆಂಟರು ಯುವಕನೊಂದಿಗೆ ವಾಗ್ವಾದ ನಡೆಸಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ವಿಡಿಯೊ ಎಲ್ಲೆಡೆ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.