ಮಂಗಳೂರು: ನೌಕರರಿಗೆ ಸಾಲು ರಜೆ, ಮಕ್ಕಳಿಗೆ ಮುಂದುವರಿದ ದಸರಾ ರಜೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು, ದೇವಾಲಯಗಳು, ಕಡಲ ತೀರಗಳು ಪ್ರವಾಸಿಗರಿಂದ ತುಂಬಿ ತುಳುಕಿದವು.
ವಾರಾಂತ್ಯದ ರಜೆ ಜೊತೆಗೆ ಸೋಮವಾರ ಮತ್ತು ಬುಧವಾರ ಸರ್ಕಾರಿ ರಜೆ. ನಡುವೆ ಒಂದು ದಿನ ವೈಯಕ್ತಿಕ ರಜೆ ಪಡೆದರೆ ಉದ್ಯೋಗಿಗಳಿಗೆ ಸತತ ನಾಲ್ಕು ದಿನ ಕೆಲಸಕ್ಕೆ ಬಿಡುವು ಸಿಗುತ್ತದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕಾರಣಕ್ಕೆ ಮಕ್ಕಳ ದಸರಾ ರಜೆ ವಿಸ್ತರಣೆಯಾಗಿದ್ದು, ಅ.23ರಂದು ಶಾಲೆ ಮರುಪ್ರಾರಂಭವಾಗಲಿದೆ. ಶಾಲೆಗೂ ರಜೆ ಇರುವ ಕಾರಣ ಪಾಲಕರು, ಮಕ್ಕಳೊಂದಿಗೆ ಜಿಲ್ಲೆಯ ದೇವಾಲಯಗಳು, ಕಡಲತೀರಗಳಿಗೆ ಭೇಟಿ ನೀಡಿದರು.
ಹೊರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ತಣ್ಣೀರುಬಾವಿ, ಪಣಂಬೂರು ಕಡಲ ಕಿನಾರೆಗೆ ಭೇಟಿ ನೀಡಿ ಸಮಯ ಕಳೆದರು. ಬೆಳಗಿನಿಂದಲೇ ಕಡಲತೀರಗಳಲ್ಲಿ ಜನಜಂಗುಳಿ ಇತ್ತು. ಸಂಜೆಯಾಗುತ್ತಲೇ ಜನದಟ್ಟಣೆ ಇನ್ನೂ ಹೆಚ್ಚಾಯಿತು. ಪಣಂಬೂರು ಬೀಚ್‌ನಲ್ಲಿರುವ ವಾಟರ್ ಸ್ಪೋರ್ಟ್ಸ್‌ಗಳು ಪ್ರವಾಸಿಗರಿಗೆ ಮುದ ನೀಡಿದವು.
ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಸಮೀಪದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಶರವು ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಇನ್ನಿತರ ದೇವಾಲಯಗಳಿಗೆ ಸಹಸ್ರಾರು ಭಕ್ತರು ಭೇಟಿ ನೀಡಿದರು.
ದೀಪಾವಳಿ ಹಬ್ಬದ ಎರಡನೇ ದಿನ ಮಂಗಳವಾರ ಅಂಗಡಿಗಳಲ್ಲಿ ಲಕ್ಷ್ಮಿಪೂಜೆ ನಡೆಯಿತು. ಹಬ್ಬದ ಸಂಭ್ರಮದಲ್ಲಿ ಹೊಸ ವಾಹನ ಖರೀದಿಸಿದವರು ದೇವಾಲಯಗಳಿಗೆ ತೆರಳಿ ವಾಹನ ಪೂಜೆ ನೆರವೇರಿಸಿದರು.
ಮುಸ್ಸಂಜೆಯಲ್ಲಿ ಕೆಲಹೊತ್ತು ಸುರಿದ ಮಳೆ ಪೇಟೆಯಲ್ಲಿ ವ್ಯಾಪಾರಕ್ಕೆ ಅಡ್ಡಿಯಾಯಿತು. ಹೂ, ಹಣ್ಣಿನ ವ್ಯಾಪಾರಿಗಳು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.