ಮಂಗಳೂರು: ವ್ಯಾಪಾರದಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿ ಮಾರ್ಬಲ್ ವ್ಯಾಪಾರಿಯೊಬ್ಬರು ವ್ಯಕ್ತಿಯೊಬ್ಬರಿಂದ ₹2.50 ಕೋಟಿ ಹಣ ಪಡೆದು ಮರಳಿಸದೇ ವಂಚಿಸಿದ ಬಗ್ಗೆ ನಗರ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಪರಿಚಯದವರೇ ಆದ ಮಹಮ್ಮದ್ ಶರೀಫ್ ಎಲ್. 2020 ನೇ ಮೇ ತಿಂಗಳಲ್ಲಿ ಸಿಕ್ಕಿದ್ದ. ರಾಜಸ್ತಾನದಿಂದ ಮಾರ್ಬಲ್ ತಂದು ಕಾಸರಗೋಡಿನಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಈ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭವಿದೆ ಎಂದು ನಂಬಿಸಿದ್ದ. 2022ರ ಮೇ 20ರಂದು ಅತ್ತಾವರದಲ್ಲಿರುವ ನನ್ನ ಮನೆಗೆ ಬಂದು ವ್ಯಾಪಾರಕ್ಕಾಗಿ ₹ 50 ಲಕ್ಷ ನಗದು ಪಡೆದಿದ್ದ. ಬಳಿಕ 2022ರ ಜೂನ್ 27ರಂದು ಹಾಗೂ ಆ. 10ರಂದು ತಲಾ ₹ 1 ಕೋಟಿ ಪಡೆದಿದ್ದ. 2023ರ ಮೇ ತಿಂಗಳಲ್ಲಿ ಆತನ ಮನೆಯಲ್ಲಿ ಭೇಟಿಯಾದಾಗ, ಹಣವನ್ನು ವಾಪಾಸು ಕೊಡುವುದಾಗಿ ನಂಬಿಸಿದ್ದ. ಈಗ ಲಾಭಾಂಶವನ್ನೂ ನೀಡದೇ ಹಾಗೂ ಹಣವನ್ನೂ ಮರಳಿಸದೇ ವಂಚಿಸಿದ್ದಾನೆ. ಹಣ ಮರಳಿಸುವಂತೆ ಕೇಳಿದರೆ ನನ್ನನ್ನೇ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ದಿದ್ದಾನೆ ಎಂದು ಎಂ. ನಾಸಿರ್ ಎಂಬುವರು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.