ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಗರದ ಹೊರವಲಯದ ಕೂಳೂರು ಹಳೆ ಸೇತುವೆಯ ಬಳಿ ದುರಸ್ತಿಯ ಕಾರಣಕ್ಕೆ ಮಂಗಳವಾರ ರಾತ್ರಿ 8 ಗಂಟೆಯಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಬುಧವಾರ ಇಡೀ ದಿನ ಈ ಭಾಗದಲ್ಲಿ ಸಂಚರಿಸುವವರು ಕಿರಿಕಿರಿ ಅನುಭವಿಸಿದರು.
ಹೊಸ ಸೇತುವೆಯ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುವ ವಾಹನಗಳು, ಉಡುಪಿ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ವಾಹನಗಳು ಸಂಚರಿಸಬೇಕಾಗಿದೆ. ಇದರಿಂದಾಗಿ, ಬೈಕಂಪಾಡಿ, ಕೊಟ್ಟಾರಚೌಕಿ, ಕೆಪಿಟಿ, ನಂತೂರು ಭಾಗದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಯಿತು.
ಶಾಲೆ –ಕಾಲೇಜು, ಉದ್ಯೋಗಿಗಳು ಉದ್ಯೋಗಕ್ಕೆ ತೆರಳುವ ಹಾಗೂ ವಾಪಸ್ ಬರುವ ಬೆಳಗಿನ ಹೊತ್ತು ಹಾಗೂ ಸಂಜೆಯ ವೇಳೆ 500 ಮೀಟರ್ ದೂರ ಕ್ರಮಿಸಲು ವಾಹನ ಸವಾರರು 45 ನಿಮಿಷಕ್ಕೂ ಹೆಚ್ಚು ಕಾಲ ಬೇಕಾಯಿತು. ಕಿ.ಮೀ. ಉದ್ದದವರೆಗೆ ವಾಹನಗಳು ಸಾಲಾಗಿ ನಿಂತಿದ್ದವು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಹಳೆ ಸೇತುವೆಯ ಬಳಿಯ ಕೆಐಒಸಿಎಲ್ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ಮಂಗಳವಾರ ರಾತ್ರಿ 8 ಗಂಟೆಯಿಂದ ಜು.25ರ ಬೆಳಿಗ್ಗೆ 8 ಗಂಟೆವರೆಗೆ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಹೀಗಾಗಿ, ಬದಲಿ ಮಾರ್ಗಕ್ಕೆ ಸಲಹೆ ನೀಡಿ ನಗರ ಪೊಲೀಸ್ ಕಮಿಷನರ್ ಪ್ರಕಟಣೆ ಹೊರಡಿಸಿದ್ದರು. ಉಡುಪಿ ಕಡೆಯಿಂದ ಬರುವ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದ ಕಾರಣ, ಅಲ್ಲಿಯೂ ವಾಹನ ದಟ್ಟಣೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.