ADVERTISEMENT

ಟ್ರಾಫಿಕ್ ಅವ್ಯವಸ್ಥೆ: ಮೂಡುಬಿದಿರೆಪುರಸಭೆ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 14:15 IST
Last Updated 8 ಆಗಸ್ಟ್ 2022, 14:15 IST
ಮೂಡುಬಿದಿರೆ ಪುರಸಭಾ ಸಭಾಂಗಣದಲ್ಲಿ ಸೋಮವಾರ ಪುರಸಭೆಯ ವಿಶೇಷ ಸಭೆ ನಡೆಯಿತು. ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಇದ್ದರು.
ಮೂಡುಬಿದಿರೆ ಪುರಸಭಾ ಸಭಾಂಗಣದಲ್ಲಿ ಸೋಮವಾರ ಪುರಸಭೆಯ ವಿಶೇಷ ಸಭೆ ನಡೆಯಿತು. ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಇದ್ದರು.   

ಮೂಡುಬಿದಿರೆ: ಏಕಮುಖ ರಸ್ತೆಯಲ್ಲಿ ವಾಹನಗಳ ಸಂಚಾರ, ಅನಧಿಕೃತ ಪಾರ್ಕಿಂಗ್‌ನಿಂದಾಗಿ ನಗರದಲ್ಲಿ ಟ್ರಾಫಿಕ್ ಅವ್ಯವಸ್ಥೆ ಬಿಗಡಾಯಿಸುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸದಸ್ಯರು ಅಸಮಾಧಾನ ಹೊರಹಾಕಿದರು.

ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ‘ಮಸೀದಿ ರಸ್ತೆ, ಇರುವೈಲ್ ರಸ್ತೆ, ನಾಗರಕಟ್ಟೆ ರಸ್ತೆ, ಆಳ್ವಾಸ್ ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಇಟ್ಟು ಹೋಗುವುದರಿಂದ ಇತರ ವಾಹನಗಳ ಸಂಚಾರ ಮತ್ತು ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗಿದೆ. ಸಾರ್ವಜನಿಕರು ನಮ್ಮನ್ನು ಬೈಯುತ್ತಿದ್ದಾರೆ’ ಎಂದು ಸದಸ್ಯರಾದ ಪಿ.ಕೆ ಥೋಮಸ್, ಕೊರಗಪ್ಪ, ರಾಜೇಶ್ ನಾಯಕ್, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್ ಹೇಳಿದರು.

ತ್ರಿಬಲ್ ರೈಡ್, ಹೆಲ್ಮೆಟ್ ಧರಿಸದೆ ಬೈಕ್‌ಗಳ ಓಡಾಟ ಹೆಚ್ಚಾಗುತ್ತಿದೆ. ಕಲ್ಲಬೆಟ್ಟು ಶಾಲೆ ಬಳಿ ರಸ್ತೆಯಲ್ಲಿರಿಸಲಾದ ಬ್ಯಾರಿಕೇಡ್‌ಗಳನ್ನು ಕಿಡಿಗೇಡಿಗಳು ಚರಂಡಿಗೆ ಎಸೆದು ಹಾಳು ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ಉಪಾಧ್ಯಕ್ಷೆ ಸುಜಾತಾ ಶಶಿಧರ್ ದೂರಿದರು.

ADVERTISEMENT

ಸಿಬಂದಿ ಕೊರತೆ: ಸದಸ್ಯರ ದೂರಿಗೆ ಪ್ರತಿಕ್ರಿಯಿಸಿದ ಸಬ್‌ ಇನ್‌ಸ್ಪೆಕ್ಟರ್‌ ದಿವಾಕರ್ ರೈ, ನಮ್ಮಲ್ಲಿ ಸಿಬಂದಿ ಕೊರತೆ ಇದೆ. ಇರುವ ಸಿಬಂದಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ. ಜಿಲ್ಲೆಯಲ್ಲಿ ಗಂಭೀರ ಅಪರಾಧಗಳು ನಡೆದಾಗ, ಗಣ್ಯರು ಭೇಟಿ ನೀಡಿದಾಗ ಪೊಲೀಸರು ಅಲ್ಲಿ ಭದ್ರತೆಗೆ ತೆರಳಬೇಕಾಗುತ್ತದೆ. ಕೋರ್ಟ್‌ ಸಮನ್ಸ್ ಜಾರಿ ಮಾಡಲು ಪೊಲೀಸರು ಬೇಕಾಗುತ್ತದೆ. ಹೀಗಾಗಿ, ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಯನ್ನು ಪ್ರತಿನಿತ್ಯ ನೋಡಿಕೊಳ್ಳಲು ಸಾಧ್ಯವಾಗದೆ ಇದ್ದರೂ ದೂರುಗಳಿರುವ ಕಡೆ ಪೊಲೀಸರು ಬಂದು ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.

ನಾಗರಕಟ್ಟೆ ರಸ್ತೆಯಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ಒಟ್ಟಾರೆಯಾಗಿ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಿರುವುದರಿಂದ ಇತರ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅಲ್ಲಿನ ಜನರು ‘ವಾರ್ಡ್‌ ಸದಸ್ಯರಿಗೆ ಕಣ್ಣು ಕಾಣುವುದಿಲ್ಲವೇ’ ಎಂದು ನನ್ನನ್ನು ಬೈಯ್ಯುತ್ತಿದ್ದಾರೆ. ಈ ಬಗ್ಗೆ ತಾನು ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತನಗೆ ಆರೋಗ್ಯವೂ ಸರಿ ಇಲ್ಲ. ತಾನು ಊರಿನವರ ಬೈಗುಳ ಕೇಳಲು ಇರುವುದೇ ಎಂದು ಸಭೆಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಮೂಡುಬಿದಿರೆಯಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಅಶಾಂತಿಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಪೊಲೀಸರು ನಿಗಾ ಇರಿಸಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ಹೇಳಿದರು.

ಮುಖ್ಯಾಧಿಕಾರಿ ಇಂದು ಎಂ,. ಮೆಸ್ಕಾಂ ಅಧಿಕಾರಿ ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.