ADVERTISEMENT

ದಕ್ಷಿಣ ಕನ್ನಡ | ಸಾಕಿನ್ನು ಸಾವು–ನೋವು; ಸಂಚಾರ ನಿಯಮ ಪಾಲಿಸೋಣ ನಾವು

ಅಪಘಾತ: ಎರಡೂವರೆ ವರ್ಷದಲ್ಲಿ 415 ಸಾವು

ಪ್ರವೀಣ ಕುಮಾರ್ ಪಿ.ವಿ.
Published 30 ಜೂನ್ 2025, 6:16 IST
Last Updated 30 ಜೂನ್ 2025, 6:16 IST
ನಗರದ ರಸ್ತೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು: ಪ್ರಜಾವಾಣಿ ಚಿತ್ರಗಳು ಫಕ್ರುದ್ದೀನ್ ಎಚ್‌.
ನಗರದ ರಸ್ತೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು: ಪ್ರಜಾವಾಣಿ ಚಿತ್ರಗಳು ಫಕ್ರುದ್ದೀನ್ ಎಚ್‌.   

ಮಂಗಳೂರು: ಇಲ್ಲಿನ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2023ರ ಜನವರಿಯಿಂದ 2025ರ ಮೇ ಅಂತ್ಯದವರೆಗೆ 415 ಜೀವಗಳು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು, 2,859 ಮಂದಿ ಗಾಯಗೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಾಗಿ ಪೊಲೀಸರು 2023ರಲ್ಲಿ 1.36 ಲಕ್ಷ, ಕಳೆದವರ್ಷ 1.44 ಲಕ್ಷ ಹಾಗೂ ಈ ವರ್ಷದ ಮೇ ಅಂತ್ಯದವರೆಗೆ 57,458 ಪ್ರಕರಣಗಳು ಸೇರಿ ಈ ಅವಧಿಯಲ್ಲಿ ಬರೋಬ್ಬರಿ 3.39 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಸಂಚಾರ ನಿಯಮಗಳ ಉಲ್ಲಂಘನೆ ಯಾವ ಪ್ರಮಾಣದಲ್ಲಿ ನಡೆಯುತ್ತಿದೆ, ಇದರಿಂದ ಆಗುತ್ತಿರುವ ಸಾವು–ನೋವುಗಳೆಷ್ಟು ಎಂಬುದನ್ನು ಈ ಅಂಕಿ–ಅಂಶಗಳು ಸಾರುತ್ತಿವೆ.  ವಾಹನ ಚಲಾಯಿಸುವವರ ಅರೆಕ್ಷಣದ ಅಸಡ್ಡೆ, ಅಜಾಗರೂಕತೆ, ಅವಸರಗಳು ಅದೆಷ್ಟೋ ಕುಟುಂಬಗಳಿಗೆ ಜಿವನ ಪರ್ಯಂತ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತಿವೆ.

ಜೀವ ಬಲಿ ಪಡೆದ ಅಮಲು

ADVERTISEMENT

ನಗರದ ಹೊರವಲಯದ ಜಪ್ಪಿನಮೊಗರುವಿನಲ್ಲಿ ಈಚೆಗೆ ಸಂಭವಿಸಿದ ರಸ್ತೆ ಅಪಘಾತ ಇಬ್ಬರು ಯುವಕರ ಜೀವಕ್ಕೆ ಎರವಾಯಿತು. ಈ ಅಪಘಾತಕ್ಕೆ ಚಾಲಕ ಅಮಲು ಪದಾರ್ಥ ಸೇವಿಸಿದ್ದುದೇ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿತು. 2023ರಲ್ಲೂ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸಿದ್ದ ಎರಡು ಪ್ರಕರಣಗಳಲ್ಲಿ ಇಬ್ಬರು ಸತ್ತಿದ್ದಾರೆ. 2024ರಲ್ಲಿ ಎರಡು ಪ್ರಕರಣಗಳಲ್ಲಿ ನಾಲ್ವರು ಹಾಗೂ 2025ರಲ್ಲಿ ಎರಡು ಪ್ರಕರಣಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿವೇಗದಲ್ಲಿ ಸಂಚರಿಸುವ ಬಸ್‌ಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ನಗರದದೊಳಗೆ ಪ್ರವೇಶಿಸಿದ ಬಳಿಕವೂ ಬಸ್‌ ಚಾಲಕರ ಧಾವಂತ ಕಡಿಮೆಯಾಗದು.  ಪಾದಚಾರಿಗಳು ಬಸ್ ಅಪಘಾತದಲ್ಲಿ ಸಾಯುವ ಪ್ರಕರಣಗಳು ನಗರದಲ್ಲಿ ಪದೇ ಪದೇ ಮರುಕಳಿಸುತ್ತಿವೆ. 

‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಎರಡೂವರೆ ವರ್ಷಗಳಲ್ಲಿ 49 ಮಂದಿ  ಬಸ್‌ ಅಪಘಾತಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 2023ರಲ್ಲಿ ಸುಮಾರು ಶೇ 14ರಷ್ಟು, 2024ರಲ್ಲಿ ಶೇ 10ರಷ್ಟು ಹಾಗೂ 2025ರಲ್ಲಿ ಶೇ 8ರಷ್ಟು ಮಂದಿಯ ಸಾವು ಸಂಭವಿಸಿದ್ದು ಬಸ್‌ ಅಪಘಾತಗಳಿಂದಾಗಿ. ಬಸ್‌ ಅಪಘಾತದಿಂದ ಸಂಭವಿಸುವ ಸಾವಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಜಾಗರೂಕ ಚಾಲನೆ ಕುರಿತು 60, ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದಿದ್ದಕ್ಕಾಗಿ 1290, ಫೂಟ್ ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ್ದಕ್ಕೆ 224, ಬಸ್‌ ಬೇ ಇಲ್ಲದ ಕಡೆ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಕೊಂಡಿದ್ದಕ್ಕೆ 39, ಕರ್ಕಶ ಹಾರ್ನ್ ಬಳಸಿದ್ದಕ್ಕೆ 189, ಟಿಕೆಟ್ ನೀಡದ್ದಕ್ಕೆ 63, ಲೇನ್ ನಿಯಮ ಉಲ್ಲಂಘನೆಗೆ 100, ಸಿಗ್ನಲ್ ಜಂಪ್‌ಗೆ 28, ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ 333, ಯೂನಿಫಾರ್ಮ್ ಧರಿಸದ್ದಕ್ಕೆ 89 ಪ್ರವೇಶವಿಲ್ಲದ ಕಡೆ ಬಸ್ ಚಲಾಯಿಸಿದ್ದಕ್ಕೆ, ಹಾಗೂ ರಾಂಗ್ ಸೈಡ್‌ ಚಾಲನೆಗೆ 106 ಪ್ರಕರಣ ಸೇರಿ ವಿವಿಧ ನಿಯಮ ಉಲ್ಲಂಘನೆ ಸಂಬಂಧ ಒಟ್ಟು 2,687 ಪ್ರಕರಣಗಳು ಬಸ್‌ ಸೇವೆಗೆ ಸಂಬಂಧಿಸಿ ದಾಖಲಾಗಿವೆ’ ಎಂದು ಮಾಹಿತಿ ನೀಡಿದರು.

‘ಸಂಚಾರ ನಿಯಮ ಪಾಲನೆ  ಕಟ್ಟು ನಿಟ್ಟಾಗಿ ಆಗಬೇಕೆಂಬ ಸಲುವಾಗಿ, ಅತಿವೇಗದ ಚಾಲನೆ, ಸಿಗ್ನಲ್ ಜಂಪ್,  ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ,  ಇಬ್ಬರಿಗಿಂತ ಹೆಚ್ಚುಮಂದಿ ಪ್ರಯಾಣಿಸುವುದು, ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಇರುವ ರಸ್ತೆಗಳಲ್ಲಿ ತದ್ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್‌, ಆಜಾಗರೂಕ ಚಾಲನೆ ಮೊದಲಾದ ಉಲ್ಲಂಘನೆ ಕುರಿತು ಕ್ಷೇತ್ರದಲ್ಲಿರುವ ಸಂಚಾರ ಪೊಲೀಸ್ ಸಿಬ್ಬಂದಿ ಫೋಟೊ ತೆಗೆದು, ವಿಡಿಯೊ ಮಾಡಿ ಸಾಕ್ಷ್ಯ ಕಲೆಹಾಕುತ್ತಾರೆ. ಸಂಬಂಧಪಟ್ಟವರಿಗೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 133 ಅಡಿ ನೋಟಿಸ್ ಜಾರಿ ಮಾಡುತ್ತೇವೆ’ ಎನ್ನುತ್ತಾರೆ ಸಂಚಾರ ವಿಭಾಗದ ಡಿಸಿಪಿ ರವಿಶಂಕರ ಕೆ.  ‌

ನಗರದ ರಸ್ತೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು

ಹದ್ದಿನ ಕಣ್ಣು ಮತ್ತಷ್ಟು ತೀಕ್ಷ್ಣ

‘ಪಾಲಿಕೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಮಾಂಡ್ ಕಂಟ್ರೋಲ್‌ ಸೆಂಟರ್‌ ಆರಂಭಿಸಲಾಗಿದೆ. ನಗರದಲ್ಲಿ ಮೊದಲ ಹಂತದಲ್ಲಿ 15 ಕಡೆ  75 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.  ಎರಡನೇ ಹಂತದಲ್ಲಿ ಮತ್ತೆ 28 ಕಡೆ  171 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕ್ಯಾಮೆರಾಗಳು ಚಲಿಸುತ್ತಿರುವ ವಾಹನಗಳ ದೃಶ್ಯಗಳನ್ನು ಸೆರೆಹಿಡಿಯುತ್ತವೆ. ಕಮಾಂಡ್ ಕಂಟ್ರೋಲ್‌ ಸೆಂಟರ್‌ನಲ್ಲಿ ದಾಖಲಾಗುವ ಈ ದೃಶ್ಯಗಳ ಆಧಾರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ಗುರುತಿಸಿ  ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕ್ರಮ ವಹಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಎರಡನೇ ಹಂತದಲ್ಲಿ ಅಳವಡಿಸಿರುವುದು ನಂಬರ್ ಪ್ಲೇಟ್‌ಗಳನ್ನು ಸ್ವಯಂ ಗುರುತಿಸುವ ಕ್ಯಾಮೆರಾಗಳನ್ನು (ಎ.ಎನ್.ಪಿ.ಆರ್‌). ನಗರದೊಳಗೆ ಪ್ರವೇಶಿಸುವ ಎಸ್‌ಎಚ್‌ಆರ್‌ಪಿ ನಂಬರ್ ಪ್ಲೇಟ್ ಇರುವ ವಾಹನಗಳ ವಿವರ ಅದರಲ್ಲಿ ದಾಖಲಾಗುತ್ತವೆ. ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸುವುದು ಮತ್ತಷ್ಟು ಸುಲಭವಾಗಲಿದೆ’  ಎಂದು ಅವರು ವಿವರಿಸಿದರು.

‘ನಿಯಮ ಉಲ್ಲಂಘಿಸಿದ ಚಾಲಕರ ಚಾಲನಾ ಪರವಾನಗಿ ರದ್ದುಪಡಿಸುವ ಅಧಿಕಾರವು ನಮಗಿದೆ. ಅನಿವಾರ್ಯವಾದರೆ ಅಂತಹ ಕ್ರಮಕ್ಕೂ ಹೇಸುವುದಿಲ್ಲ. ಆದರೆ ಸಾರ್ವಜನಿಕರು ಅದಕ್ಕೆ ಅವಕಾಶ ನೀಡಬಾರದು’ ಎಂದರು.

ಹೆಲ್ಮೆಟ್‌ ರಹಿತ ಚಾಲನೆ ಅಪಾಯಕ್ಕೆ  ಆಹ್ವಾನ
ಸಂಚಾರ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಚಾಲಕರು ಮ್ಮ ಹಾಗೂ ಕುಟುಂಬದವರ ಹಾಗೂ ಸಾರ್ವಜನಿಕರ ಜೀವದ ಬಗ್ಗೆಯೂ ಕಾಳಜಿ ವಹಿಸಬೇಕು.
– ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಪೊಲೀಸ್ ಕಮಿಷನರ್‌

‘ಬಾಕಿ ದಂಡ ಕಟ್ಟಲು ಜುಲೈ 15ರ ಗಡುವು’

‘ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಬಾಕಿ ಇರುವರು ಜುಲೈ 15ರ ಒಳಗೆ ದಂಡ ಕಟ್ಟಬೇಕು. ಸಂಚಾರ ನಿಯಮ ಉಲ್ಲಂಘನೆಗೆ ವಾಹನ ಮಾಲಿಕರಿಗೆ ದಂಡ ಪಾವತಿ ನೋಟಿಸ್ ಕಳುಹಿಸಲಾಗಿದೆ. ಗಡುವಿನೊಳಗೆ ದಂಡ ಪಾವತಿಸದವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುತ್ತದೆ. ನ್ಯಾಯಾಲಯದಿಂದ ಸಮನ್ಸ್ ಅಥವಾ ವಾರಂಟ್‌ ಜಾರಿಗೊಳಿಸಲಾಗುತ್ತದೆ’ ಎಂದು ಸಂಚಾರ ವಿಭಾಗದ ಡಿಸಿಪಿ  ಕೆ.ರವಿಶಂಕರ್‌ ತಿಳಿಸಿದರು.

ಉಲ್ಲಂಘನೆ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಕದ್ರಿಯ ಸಂಚಾರ ಪೂರ್ವ (ಸಂಪರ್ಕ 0824-2220523) ಪಾಂಡೇಶ್ವರದ ಸಂಚಾರ ಪಶ್ಚಿಮ (0824-2220524) ಬೈಕಂಪಾಡಿಯ ಸಂಚಾರ ಉತ್ತರ (0824-2220833) ಜಪ್ಪಿನಮೊಗರುವಿನ ಸಂಚಾರ ದಕ್ಷಿಣ (0824-2220850) ಠಾಣೆಗಳನ್ನುಅಥವಾ ಪಾಂಡೇಶ್ವರದ ಸಂಚಾರ ವಿಭಾಗದ ಎಸಿಪಿ (0824-2220823) ಕಚೇರಿಯನ್ನು ಸಂಪರ್ಕಿಸಬಹುದು ಎಂದರು

ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಕಮಾಂಡ್ ಕಂಟ್ರೋಲ್ ಸೆಂಟರ್‌

‘ಚಾಲನೆ ತರಬೇತಿ ಕಡ್ಡಾಯವಾಗಲಿ’

‘ನಮ್ಮಲ್ಲಿ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಸಾರಿಗೆ ನಿಯಮ ಉಲ್ಲಂಘನೆ ಅವೈಜ್ಞಾನಿಕ ರಸ್ತೆಗಳು ವಾಹನದ ಸ್ಥಿತಿ ಚಾಲಕ ವ್ಯವಸ್ಥೆ ಹಾಗೂ ಸಾರಿಗೆ ಸೇವೆ ನೀಡುವ ಸಂಸ್ಥೆಗಳು. ಸಾರಿಗೆ ನಿಯಮಗಳ ಬದ್ಧತೆ ಹಾಗೂ ಬಾಧ್ಯತೆಗಳನ್ನು ಚಾಲಕರು ತಿಳಿದಿರಬೇಕು. ಡ್ರೈವಿಂಗ್‌ ಸ್ಕೂಲ್‌ನಲ್ಲಿ ತರಬೇತಿ ಪಡೆಯದೆಯೇ ಭಾರಿ ವಾಹನ ಚಲಾಯಿಸುವ ಪರಿಪಾಟ ನಿಲ್ಲಬೇಕು. ನಮ್ಮಲ್ಲಿ ಶೇ 90ರಷ್ಟು ಚಾಲಕರು ಕ್ರಮಬದ್ಧ ತರಬೇತಿ ಪಡೆದವರಲ್ಲ. ಚಾಲನಾ ತರಬೇತಿ ಕೇಂದ್ರಗಳ ಕೊರತೆಯೂ ಇದೆ’ ಎನ್ನುತ್ತಾರೆ ರಾಷ್ಟ್ರೀಯ ಸುರಕ್ಷತಾ ಕೌನ್ಸಿಲನ ಆಜೀವ ಸದಸ್ಯರಾಗಿರುವ ಜಾಗೃತಿ  ಸೇಫ್ಟಿ ಕೌನ್ಸಿಲ್‌ನ ಭುಜಂಗ ಶೆಟ್ಟಿ ಗುಡ್ಡೆಗುತ್ತು.

‘ವಾಹನ ತನ್ನಷ್ಟಕ್ಕೇ ಚಲಿಸದು. ಹಾಗಾಗಿ ಅಪಘಾತಕ್ಕೆ ಚಾಲಕನೇ ಹೊಣೆ. ವಾಹನಗಳ ನಿರ್ವಹಣೆಯ ಹೊಣೆಯೂ ಆತನದೇ. ಹಣ ಉಳಿಸುವ ಸಲುವಾಗಿ ಸೂಕ್ತ ಬಿಡಿಭಾಗ ಬಳಸದೇ ಇರುವುದು ಅರ್ಹವಲ್ಲದ ವರ್ಕ್‌ಶಾಪ್‌ಗಳಲ್ಲಿ ವಾಹನ ದುರಸ್ತಿ ತಪ್ಪಬೇಕು. ಚಾಲಕರನ್ನು ಟ್ರಾನ್ಸ್‌ಪೋರ್ಟ್‌ ಸೇವಾ ಸಂಸ್ಥೆಗಳು ಇಚ್ಛಾನುಸಾರ ಬಳಸುತ್ತಿವೆ. ಅವರ ವ್ಯಕ್ತಿಗತ ಜೀವನ ಆರೋಗ್ಯ ಭವಿಷ್ಯದ ಬಗ್ಗೆಯೂ ಸರ್ಕಾರ ಕ್ರಮವಹಿಸುವ ಅಗತ್ಯವಿದೆ. ನಮ್ಮಲ್ಲಿನ ಅನೇಕ ರಸ್ತೆಗಳು ಅವೈಜ್ಞಾನಿಕ ಎಂದು ಗೊತ್ತಿದ್ದರೂ ಸರಿಪಡಿಸುವ  ಕಾರ್ಯ ಆಗುತ್ತಿಲ್ಲ’ ಎಂದರು.

‘ಚಾಲಕರಿಗೆ ಸುರಕ್ಷಿತ ಚಾಲನೆಯ ಹಾಗೂ ರಸ್ತೆ ಸಂಕೇತಗಳು ಮತ್ತು ಸಿಗ್ನಲ್‌ಗಳ ಅರಿವು ಮೂಡಿಸಬೇಕು.  ಮೋಟಾರುವಾಹನ ಕಾಯ್ದೆಯ ಮೂಲ ಅಂಶಗಳನ್ನು ತಿಳಿಸಬೇಕು.  ಪ್ರತಿಸಲ ಚಾಲನಾ ಪರವಾನಗಿ ನವೀಕರಿಸುವಾಗ ಮುಡಿಪು ಬಳಿಯ  ಕಂಬಳಪದವಿನಲ್ಲಿರುವ  ಭಾರಿ ವಾಹನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವುದನ್ನು ಕಡ್ಡಾಯ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.  

ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಕಮಾಂಡ್ ಕಂಟ್ರೋಲ್ ಸೆಂಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.