ADVERTISEMENT

ಕಡಲಿನೆಡೆಗೆ ಮುಖ ಮಾಡಿದ ಟ್ರಾಲ್ ಬೋಟ್‌ಗಳು: ಭರ್ಜರಿ ಮತ್ಸ್ಯ ಫಸಲಿನ ನಿರೀಕ್ಷೆ

ಆ.10ರಿಂದ ಪರ್ಸಿನ್‌ ಬೋಟ್‌ಗಳ ಶಿಕಾರಿ

ಸಂಧ್ಯಾ ಹೆಗಡೆ
Published 4 ಆಗಸ್ಟ್ 2025, 5:41 IST
Last Updated 4 ಆಗಸ್ಟ್ 2025, 5:41 IST
ದಕ್ಕೆಯಲ್ಲಿ ಬೋಟ್‌ಗಳಿಗೆ ಐಸ್ ತುಂಬಿಸುವ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರು
ದಕ್ಕೆಯಲ್ಲಿ ಬೋಟ್‌ಗಳಿಗೆ ಐಸ್ ತುಂಬಿಸುವ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರು   

ಮಂಗಳೂರು: ಎರಡು ತಿಂಗಳುಗಳಿಂದ ಶಾಂತವಾಗಿದ್ದ ದಕ್ಕೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಬಂದರಿನಲ್ಲಿ ಮತ್ತೆ ಮಿನಿ ಭಾರತ ಮೈದಳೆದಿದೆ. ಎರಡು ತಿಂಗಳ ರಜೆ ಮುಗಿಸಿ ವಾಪಸಾಗಿರುವ ಹೊರ ರಾಜ್ಯಗಳ ಕಾರ್ಮಿಕರು ಹೊಸ ಹುಮ್ಮಸ್ಸಿನಲ್ಲಿ ಮೀನು ಶಿಕಾರಿಗೆ ಹೊರಟಿದ್ದಾರೆ. ಲಂಗರು ಹಾಕಿದ್ದ ಬೋಟ್‌ಗಳು ಅಲೆಗಳ ಬೆನ್ನೇರಿ ಕಡಲಿನತ್ತ ಮುಖ ಮಾಡಿವೆ. 

ಹೊಸ ಬಲೆಯೊಂದಿಗೆ ಕನಸನ್ನು ಹೆಣೆದ ಮೀನುಗಾರರು ಭರ್ಜರಿ ಫಸಲಿನ ನಿರೀಕ್ಷೆಯಲ್ಲಿ ಮೀನುಬೇಟೆಗೆ ತೆರಳಿದ್ದಾರೆ. ಉಬ್ಬರವಿಲ್ಲದ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ, ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕಾ ಋತುವೂ ಆರಂಭವಾಗಿದೆ.

ಬಂದರಿನಲ್ಲೀಗ ಐಸ್‌ ಬ್ಲಾಕ್‌ಗಳನ್ನು ಬೋಟ್‌ಗೇರಿಸುವ, ಬಲೆಗಳನ್ನು ಜೋಡಿಸಿಡುವ, ಜಿಪಿಎಸ್‌, ಮೀನು ಪತ್ತೆ ಸಾಧನ (ಫಿಷ್ ಫೈಂಡರ್) ಅಳವಡಿಸುವ ಧಾವಂತ. ಪೂರ್ವಭಾವಿಯಾಗಿ ಈ ಎಲ್ಲ ಸಿದ್ಧತೆ ಮಾಡಿಕೊಂಡಿರುವ ಶೇ 50ರಷ್ಟು ಟ್ರಾಲ್ ಬೋಟ್‌ಗಳು, ಕಡಲ ಒಡಲಿನೆಡೆಗೆ ಸಾಗಿವೆ.

ADVERTISEMENT

‘ಯಾವುದೇ ಹವಾಮಾನ ವೈಪರೀತ್ಯ ಇಲ್ಲದೆ ಮೀನುಗಾರಿಕಾ ಋತು ಶುಭಾರಂಭವಾಗಿದೆ. ಜುಲೈ 27ರವರೆಗೂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇತ್ತು. ಹೀಗಾಗಿ, ಕೆಲವು ಬೋಟ್‌ಗಳು ಮೀನುಗಾರಿಕೆಗೆ ತೆರಳಲು ಇನ್ನೂ ರೆಡಿಯಾಗಿಲ್ಲ. ಮಂಗಳೂರಿನ ಮೀನುಗಾರಿಕೆ ಹೊರ ರಾಜ್ಯಗಳ ಕಾರ್ಮಿಕರನ್ನು ಅವಲಂಬಿಸಿದೆ. ಬೋಟ್ ಮಾಲೀಕರಿಂದ ಸಂದೇಶ ಹೋದ ಮೇಲೆ ಅವರು ತಮ್ಮ ಊರಿನಿಂದ ಹೊರಟು ಇಲ್ಲಿ ಬಂದು ತಲುಪಲು 3–4 ದಿನ ಬೇಕು. ಶೇ 80ರಷ್ಟು ಜನರು ಕೆಲಸಕ್ಕೆ ಹಾಜರಾಗಿದ್ದಾರೆ. ಅಲ್ಲದೆ, ದಕ್ಕೆಯಲ್ಲಿ ಬೋಟ್ ನಿಲುಗಡೆಗೆ ಜಾಗದ ಅಭಾವ ಇರುವುದರಿಂದ ಐಸ್ ಹಾಕಲು ಸರದಿಯಲ್ಲಿ ಕಾಯಬೇಕಾಗುತ್ತದೆ. ಆ ಕಾರಣಕ್ಕೆ ಹಂತ ಹಂತವಾಗಿ ಬೋಟ್‌ಗಳು ಕಡಲಿಗೆ ಇಳಿಯುತ್ತವೆ’ ಎನ್ನುತ್ತಾರೆ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ.

ಆಗಸ್ಟ್‌ನಿಂದ ಸೆಪ್ಟೆಂಬರ್‌ ತಿಂಗಳು, ಪರ್ಸಿನ್ ಬೋಟ್ ಮತ್ತು ಟ್ರಾಲ್‌ ಬೋಟ್‌ಗಳಿಗೆ ಹೆಚ್ಚು ಫಸಲು ಕೈಗೆ ಸಿಗುವ ಅವಧಿ. ಈ ಬಾರಿ ಕಡಲಿನಲ್ಲಿ ಒಳ್ಳೆಯ ತೂಫಾನ್ ಬಂದಿದೆ. ಆಳ ಸಮುದ್ರ ಮೀನುಗಾರಿಕೆ ನಡೆಸದೆ ಎರಡೂವರೆ ತಿಂಗಳುಗಳು ಕಳೆದಿವೆ. ಹೀಗಾಗಿ, ಹೆಚ್ಚು ಮೀನು ಸಿಗುವ ಭರವಸೆ ಇದೆ ಎನ್ನುತ್ತಾರೆ ಅವರು.

ಪರಸ್ಪರ ಹೊಂದಾಣಿಕೆ: ‘200 ಬೋಟ್‌ಗಳು ನಿಲ್ಲಬಹುದಾದ ಸ್ಥಳದಲ್ಲಿ 1,500 ಬೋಟ್‌ಗಳು ಲಂಗರು ಹಾಕಿವೆ. ಎಲ್ಲವೂ ಒಮ್ಮೆಲೇ ಸಮುದ್ರಕ್ಕಿಳಿಯಲು ಹೊರಟರೆ ಒತ್ತಡ ಸೃಷ್ಟಿಯಾಗುತ್ತದೆ. ಟ್ರಾಲ್‌ಬೋಟ್ ಈಗ ಹೊರಟಿದ್ದು, ಪರ್ಸಿನ್‌ ಬೋಟ್‌ಗಳು ಆಗಸ್ಟ್ 10ರಿಂದ ಕಡಲಿಗೆ ಇಳಿಯಲಿವೆ. ಸಭೆ ನಡೆಸಿ, ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್ ಮಾಹಿತಿ ನೀಡಿದರು.

‘ಈ ಬಾರಿ ಮೂರು ತಿಂಗಳು ನಿರಂತರ ಮಳೆಯಾಗಿದೆ. ಗುಡ್ಡದ ನೀರು ಸಮುದ್ರದ ಆಳಕ್ಕೆ ಹರಿದರೆ, ಮೀನಿಗೆ ಒಳ್ಳೆಯ ಆಹಾರ ಸಿಗುತ್ತದೆ. ಈ ವರ್ಷ ಸಿಹಿನೀರು ಕಡಲ ಒಡಲಿನಲ್ಲಿ ಕಿ.ಮೀ ದೂರದವರೆಗೂ ಹರಿದಿರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ, ಮೀನು ಇಳುವರಿ ಭರಪೂರ ಸಿಗಬಹುದೆಂಬ ಆಶಾಭಾವ ಇದೆ. ಆಗಸ್ಟ್ 15ರ ವೇಳೆಗೆ ಎಲ್ಲ ಟ್ರಾಲ್‌ ಮತ್ತು ಪರ್ಸಿನ್ ಬೋಟ್‌ಗಳು ಸಮುದ್ರಕ್ಕಿಳಿದು ಪೂರ್ಣ ಪ್ರಮಾಣದ ಮೀನುಗಾರಿಕೆ ಶುರುವಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಮಸ್ಯೆಗಳ ಸಾಲು: ‘ಮೀನುಗಾರಿಕೆ ಭೂಮಿ ಮೇಲಿನ ಕೃಷಿ ಬೆಳೆಗಳಂತೆ ಅಲ್ಲ, ಯಾವತ್ತಿಗೂ ಅನಿಶ್ಚಿತ. ದೇವರ ಮೇಲೆ ಭಾರ ಹಾಕಿ ಹೋಗುತ್ತೇವೆ. ಒಳ್ಳೆಯ ಇಳುವರಿ ಸಿಕ್ಕಿದರೆ ಖುಷಿ. ಪರ್ಸಿನ್ ಬೋಟ್‌ನಲ್ಲಿ ಒಮ್ಮೆ ಮೀನುಗಾರಿಕೆಗೆ ತೆರಳಲು ಕೈಯಲ್ಲಿ ₹10 ಲಕ್ಷ ಹಣ ಇರಬೇಕು. 6,000 ಲೀಟರ್ ಡೀಸೆಲ್, 600 ಬ್ಲಾಕ್ ಅಂದರೆ 30 ಟನ್ ಐಸ್, 12 ಸಾವಿರ ಲೀಟರ್ ನೀರು, ₹30 ಸಾವಿರ ಮೊತ್ತದ ಆಹಾರ ಸಾಮಗ್ರಿ ಇವಿಷ್ಟು ಸಿದ್ಧತೆ ಇರಬೇಕಾಗುತ್ತದೆ. ಸಮುದ್ರದ ಸೆಳೆತಕ್ಕೆ ಬಲೆಗಳು ಬೇಗ ಲಡ್ಡಾಗುತ್ತವೆ. ಪ್ರತಿವರ್ಷ ಹೊಸ ಬಲೆ ಸಿದ್ಧವಾಗಬೇಕು. ಅದಕ್ಕೆ ಇನ್ನಷ್ಟು ಖರ್ಚು ಮಾಡಬೇಕು ಎಂದು ಅವರು ಸಮಸ್ಯೆಗಳನ್ನು ಬಿಚ್ಚಿಟ್ಟರು. 

ಈಗ ಇರುವ ಪರ್ಸಿನ್ ಬೋಟ್‌ಗಳಲ್ಲಿ ಶೇ 95 ಸ್ಟೀಲ್ ಬೋಟ್‌ಗಳು. ಬೇಗ ತುಕ್ಕು ಹಿಡಿಯುವ ಬೋಟ್‌ಗಳಿಗೆ ಆರು ತಿಂಗಳಿಗೊಮ್ಮೆ ಪೇಂಟ್ ಮಾಡಲೇ ಬೇಕು. ಬೋಟ್ ಅನ್ನು ನೀರಿನಿಂದ ಮೇಲಕ್ಕೆತ್ತಿ ಕೆಳಗಿಳಿಸುವ ಲಾಂಚಿಂಗ್ ಪ್ರಕ್ರಿಯೆಗೆ ₹75 ಸಾವಿರ ಖರ್ಚಾಗುತ್ತದೆ. ಚೈನಾ ನಿರ್ಮಿತ ಎಂಜಿನ್‌ ಕೆಲವೊಮ್ಮೆ ದೀರ್ಘ ಬಾಳಿಕೆ ಬರುತ್ತದೆ, ಇನ್ನು ಕೆಲವೊಮ್ಮೆ ಬೇಗ ಕೈಕೊಡುತ್ತದೆ. ದುರಸ್ತಿಗೆ ವಿಪರೀತ ವೆಚ್ಚವಾಗುತ್ತದೆ. ಹೀಗೆ, ಸಂಕಷ್ಟಗಳ ನಡುವೆ ಮೀನುಗಾರಿಕೆ ಮುಂದುವರಿದಿದೆ ಎಂದು ವಿವರಿಸಿದರು.

ಮೀನು ಶಿಕಾರಿ ಸಿದ್ಧವಾಗಿರುವ ಬಲೆ
ಮಂಗಳೂರಿನ ದಕ್ಕೆ

‘ಮೂರನೇ ಹಂತದ ವಿಸ್ತರಣೆ ಬೇಗ ಮುಗಿಸಿ’:

ದಕ್ಕೆಯೆಂದರೆ ಸುಮಾರು 10 ಸಾವಿರ ಕುಟುಂಬಗಳ ದುಡಿಮೆಯ ನೆಲ. ಜಾರ್ಖಂಡ್ ಒಡಿಶಾ ಆಂಧ್ರ ಪ್ರದೇಶ ಕೇರಳ ಮೊದಲಾದ ಭಾಗಗಳಿಂದ ಜನರು ಬರುತ್ತಾರೆ. ಆದರೆ ಇಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಶೆಡ್‌ ಇಲ್ಲ ರಸ್ತೆ ಸಮರ್ಪಕವಾಗಿಲ್ಲ. ಆದಷ್ಟು ಶೀಘ್ರ ಮೂರನೇ ಹಂತದ ಬಂದರು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಮುಗಿದಂತೆ ಆ ಭಾಗವನ್ನು ಬಿಟ್ಟುಕೊಡಬೇಕು ಎನ್ನುತ್ತಾರೆ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ.

‘ಹೆಚ್ಚುವರಿ ಬೋಟ್‌ಗೆ ಅನುಮತಿ ಬೇಡ’:

ಈಗಾಗಲೇ ಬೋಟ್‌ಗಳ ಸಂಖ್ಯೆ ಹೆಚ್ಚಿದೆ. ಇರುವ ಬೋಟ್‌ಗಳೇ ಮೂರು ತಿಂಗಳು ಕಾರ್ಯಾಚರಿಸಿ ಲಂಗರು ಹಾಕಿ ನಿಲ್ಲುತ್ತವೆ. ಕಳೆದ ವರ್ಷ ಮೀನು ಸಿಗದೆ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಲಂಗರು ಹಾಕಲು ಜಾಗದ ಅಭಾವವೂ ಇದೆ. ಒತ್ತಟ್ಟಿಗೆ ಲಂಗರು ಹಾಕಿದರೆ ಬೋಟ್‌ಗಳಿಗೆ ಹಾನಿ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೊಸ ಬೋಟ್‌ಗಳಿಗೆ ಸದ್ಯ ಅನುಮತಿ ನೀಡಬಾರದು ಎಂದು ಕರ್ನಾಟಕ ಕರಾವಳಿ ಕ್ರಿಯಾ ಸಮಿತಿ ಒಕ್ಕೂಟ ವತಿಯಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೀನುಗಾರ ಮುಖಂಡರೊಬ್ಬರು ತಿಳಿಸಿದರು.

ಬೋಟ್‌ಗಳಲ್ಲಿ ಸುಧಾರಿತ ತಂತ್ರಜ್ಞಾನ:

ಟ್ರಾನ್ಸ್ ಪಾಂಡರ್‌ಗಳನ್ನು (ಸಂಕೇತವನ್ನು ಸ್ವಯಂಚಾಲಿತವಾಗಿ ಸ್ವೀಕರಿಸಿ ಪ್ರತಿಕ್ರಿಯಿಸುವ ಸಾಧನ ರಾಡಾರ್ ಸೆಟ್‌) ಸರ್ಕಾರ ಉಚಿತವಾಗಿ ನೀಡಿದೆ. ಎಲ್ಲ ಬೋಟ್‌ಗಳಲ್ಲಿ ಇದನ್ನು ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಡೀಸೆಲ್ ಸೌಲಭ್ಯ ಸಿಗುವುದಿಲ್ಲ. ಮೀನು ಪತ್ತೆ (ಫಿಷ್ ಫೈಂಡರ್) ಸಾಧನ ಜಿಪಿಎಸ್‌ಗಳು ಸಹ ಈಗ ಎಲ್ಲ ಬೋಟ್‌ಗಳಲ್ಲಿ ಇವೆ. ಇದರಿಂದ ಬೋಟ್‌ಗಳು ಅಪಾಯಕ್ಕೆ ಸಿಲುಕಿದರೆ ಪತ್ತೆ ಮಾಡುವುದು ಸುಲಭವಾಗುತ್ತದೆ ಎಂದು ಮೀನುಗಾರ ಮುಖಂಡರು ತಿಳಿಸಿದರು.

ನಿಧಿಯ ಪಾಲಿನ ಮೊತ್ತ ಇಳಿಸಿ:

ಮೀನುಗಾರಿಕೆಗೆ ತೆರಳಿದಾಗ ಅವಘಡ ಸಂಭವಿಸಿದರೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಸಂತ್ರಸ್ತ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಮೊತ್ತವನ್ನು ಸರ್ಕಾರ ನೀಡುತ್ತದೆ. ಹಿಂದೆ ಈ ಮೊತ್ತ ₹6 ಲಕ್ಷ ಇತ್ತು. ಇದು ಸಮಾಧಾನಕರ ಸಂಗತಿ. ಆದರೆ ಇದೇ ವೇಳೆ ಪರಿಹಾರ ನಿಧಿಗೆ ನೀಡುವ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್‌ ಡೀಸೆಲ್‌ ಮೇಲೆ ₹1.49 ಪೈಸೆ ಮೊತ್ತವನ್ನು ನಿಧಿಗೆ ನೀಡಬೇಕಾಗುತ್ತದೆ. ಸರ್ಕಾರ ಈ ಮೊತ್ತವನ್ನು ತಗ್ಗಿಸಿ ಹಿಂದಿನಂತೆ 25 ಪೈಸೆ ಇಡಬೇಕು. ಇದು ಮೀನುಗಾರರಿಗೆ ಹೊರೆಯಾಗಿದೆ. ಕೊನೆಪಕ್ಷ ಈಗ ಇರುವ ಮೊತ್ತವನ್ನು ಅರ್ಧಕ್ಕೆ ಇಳಿಸಬೇಕು ಎಂಬುದು ಮೀನುಗಾರ ಮುಖಂಡರ ಆಗ್ರಹ.

‘ಹೊಸ ಬೋಟ್ ನಿರ್ಮಾಣಕ್ಕೆ ಅವಕಾಶ’:

ಮೀನುಗಾರಿಕಾ ಬೋಟ್‌ಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದಾಗಿ ಬೋಟ್‌ಗಳು ಇರುವ ಸ್ಥಳ ಎಷ್ಟು ಬೋಟ್‌ಗಳು ಕಡಲಿಗೆ ಇಳಿದಿವೆ ಎಷ್ಟು ದಕ್ಕೆಯಲ್ಲೇ ಇವೆ ಈ ಎಲ್ಲ ಅಂಕಿ–ಸಂಖ್ಯೆಗಳು ಖಚಿತವಾಗಿ ದೊರೆಯುತ್ತವೆ. ಬೋಟ್‌ಗಳು ಹಳೆಯದಾಗಿದ್ದರೆ ಪರ್ಯಾಯವಾಗಿ ಹೊಸ ಬೋಟ್ ನಿರ್ಮಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಹೊಸ ಅನುಮತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ದಕ್ಕೆಯಲ್ಲಿ ಲಂಗರು ಹಾಕಲು ಜಾಗದ ಕೊರತೆ ಇದೆ. ಹೊಸ ಬಂದರು ಸಿದ್ಧವಾದ ಮೇಲೆ ಈ ಬಗ್ಗೆ ಯೋಚಿಸಬೇಕಾಗಿದೆ ಎಂದು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.