ಉಳ್ಳಾಲ: 5ರಿಂದ 13ವರ್ಷದ ಮಕ್ಕಳನ್ನು ಒಳಗೊಂಡ ‘ಚಿಲ್ಟ್ರನ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯ (ಸಿಐಒ) ವತಿಯಿಂದ ರಾಷ್ಟ್ರಮಟ್ಟದಲ್ಲಿ ಜೂನ್ 25ರಿಂದ ಜುಲೈ 26ರವರೆಗೆ ಮಣ್ಣಿನಲ್ಲಿ ಕೈಗಳು, ಭಾರತದೊಂದಿಗೆ ಹೃದಯಗಳು ಎಂಬ ಧ್ಯೇಯವಾಕ್ಯದೊಂದಿಗೆ ದೇಶದಾದ್ಯಂತ ಒಂದು ಮಿಲಿಯನ್ ಹಾಗೂ ಉಳ್ಳಾಲ ತಾಲ್ಲೂಕಿನಾದ್ಯಂತ 500 ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ರೂಪಿಸಿದೆ.
ಈ ಕುರಿತು ಸಿಒಒ ಸದಸ್ಯರಾಗಿರುವ ಆರು ಮಕ್ಕಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆಗಳಲ್ಲಿ, ಆರಾಧನಾ ಸ್ಥಳಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡವನ್ನು ಈಗಾಗಲೇ ನೆಡಲಾಗಿದ್ದು, ಜುಲೈ 26ರ ವರೆಗೂ ಅಭಿಯಾನ ಮುಂದುವರಿಯಲಿದೆ. ಸಿಇಐ ರಾಷ್ಟ್ರೀಯ ಮಟ್ಟದ ಸಂಘಟನೆಯಾಗಿದ್ದು, 5 ರಿಂದ 13 ವರ್ಷ ವಯಸ್ಸಿನ ಮಕ್ಕಳೇ ಸದಸ್ಯರಾಗಿದ್ದಾರೆ. ಬಾಂಧವ್ಯ, ಸೌಹಾರ್ದ, ಶಿಸ್ತು, ಸ್ವಚ್ಛತೆ, ಮೌಲ್ಯಾಧಾರಿತ ವಿಚಾರಗಳು, ಪರಿಸರ ಪ್ರೇಮದ ವಿಚಾರಗಳಲ್ಲಿ ತರಬೇತಿಯನ್ನು ಸಾಪ್ತಾಹಿಕವಾಗಿ ಪಡೆದುಕೊಳ್ಳುತ್ತಿದ್ದೇವೆ. ಗಿಡ ನೆಡುವ ಜತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಾವೇ ಮಾಡುತ್ತಿದ್ದೇವೆ. ಒಂದೆರಡು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಅಭಿಯಾನ ನಡೆಯುತ್ತಿದೆ. ಹಣ್ಣುಗಳ ಗಿಡವನ್ನೇ ನೆಡಲಾಗುತ್ತಿದೆ ಎಂದರು.
ಸಿಐಒ ಸದಸ್ಯರಾದ ಹಿರಾ ಸ್ಕೂಲ್‌ನ ಅಮ್ನಾನ್ ಅಹ್ಮದ್, ಸೇಂಟ್ ಮೇರಿಸ್ ಸ್ಕೂಲ್‌ನ ಹಾಜಿರಾ ಹನಿಯ್ಯ, ಪೀಸ್ ಪಬ್ಲಿಕ್ ಸ್ಕೂಲ್‌ನ ರಿಫಾ ಮಾಶಿತ, ವಿದ್ಯಾರತ್ನ ಸ್ಕೂಲ್‌ನ ಆಯಿಶಾ ಶಹರೀನ್, ಹಿರಾ ಶಾಲೆಯ ಮುಹಮ್ಮದ್ ಅಯಾನ್, ಖತೀಜ ಅಭಿಯಾನದ ಬಗ್ಗೆ ವಿವರಣೆಯನ್ನು ನೀಡಿದರು.
ಅಭಿಯಾನದ ಕುರಿತ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ಸಿಐಒ ಸಂಚಾಲಕರಾದ ನಿಝಾಮುದ್ದೀನ್ ಉಮರ್, ಮಹಿಳಾ ಸಂಚಾಲಕಿ ಹಪ್ಪಾ, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಅಧ್ಯಕ್ಷ ಅಬ್ದುಲ್ ಮಜೀದ್, ಮಹಿಳಾ ಸಂಚಾಲಕಿ ಝರೀನ ಬೇಗಮ್, ಹಿಪ್ಪಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.