ADVERTISEMENT

ಪದವಿ ತುಳು ಪಠ್ಯಪುಸ್ತಕ ‘ಸಿರಿದೊಂಪ’ ಸಿದ್ಧ

ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅಳವಡಿಕೆ

ಮಹಮ್ಮದ್ ಶರೀಫ್ ಕಾಡುಮಠ
Published 7 ಜುಲೈ 2019, 20:00 IST
Last Updated 7 ಜುಲೈ 2019, 20:00 IST
ಸಿರಿದೊಂಪ ಪಠ್ಯಪುಸ್ತಕದ ಮುಖಪುಟ
ಸಿರಿದೊಂಪ ಪಠ್ಯಪುಸ್ತಕದ ಮುಖಪುಟ   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿಶ್ವವಿದ್ಯಾಲಯ ವ್ಯಾಪ್ತಿಯ ಆರು ಕಾಲೇಜುಗಳಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಬಿ.ಎ. ತರಗತಿಗೆ ದ್ವಿತೀಯ ಭಾಷೆಯಾಗಿ ತುಳು ಭಾಷೆಯನ್ನು ಆಯ್ಕೆ ಮಾಡಲಾಗಿದ್ದು, ತುಳು ಪಠ್ಯಪುಸ್ತಕ ‘ಸಿರಿದೊಂಪ’ ಬಿಡುಗಡೆಗೆ ಸಿದ್ಧವಾಗಿದೆ.

ಮೂಡುಬಿದಿರೆಯ ಆಳ್ವಾಸ್‌ ಕಾಲೇಜು, ಹಂಪನಕಟ್ಟೆಯ ವಿಶ್ವವಿದ್ಯಾ ಲಯ ಕಾಲೇಜು ಹಾಗೂ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ 6 ಪದವಿ ಕಾಲೇಜುಗಳು ತುಳು ಪದವಿ ತರಗತಿ ಆರಂಭಿಸಿವೆ.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಅವರ ಪ್ರಧಾನ ಸಂಪಾದಕತ್ವದಲ್ಲಿ ‘ಸಿರಿದೊಂಪ’ ಎಂಬ ಪಠ್ಯಪುಸ್ತಕ ಸಿದ್ಧಗೊಂಡಿದ್ದು, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ ಗೌರವ ಸಂಪಾದಕರಾಗಿದ್ದಾರೆ. ತುಳು ಭಾಷೆಯ ವಿದ್ವಾಂಸ ಡಾ.ಪೂವಪ್ಪ ಕಣಿಯೂರು ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.

ADVERTISEMENT

ಎರಡು ವರ್ಷದ ಪಠ್ಯಕ್ರಮ ಈಗಾಗಲೇ ಸಿದ್ಧವಾಗಿದ್ದು, ಪಠ್ಯಪುಸ್ತಕ ರಚನೆಯಾಗುತ್ತಿದೆ. ಪ್ರತಿ ಸೆಮಿಸ್ಟರ್‌ನಲ್ಲಿ ಪಠ್ಯಪುಸ್ತಕದ ಸಂಪಾದಕ ಮಂಡಳಿ ಬದಲಾಗಲಿದ್ದು, ಸದ್ಯ ಡಾ. ಪ್ರಕಾಶ್ಚಂದ್ರ ಶಿಶಿಲ, ಪ್ರೊ. ತಾರಾಕುಮಾರಿ, ಪ್ರೊ. ಕೃಷ್ಣಮೂರ್ತಿ, ಡಾ. ನರೇಂದ್ರ ರೈ ದೇರ್ಲ,
ಡಾ. ಪ್ರಜ್ಞಾ ಮಾರ್ಪಳ್ಳಿ ಸದಸ್ಯರಾಗಿದ್ಧಾರೆ.

ತುಳುನಾಡಿನ ಪ್ರಸಿದ್ದ ಕವಿಗಳು ರಚಿಸಿರುವ ತುಳು ಕವಿತೆಗಳನ್ನು ಪಠ್ಯಪುಸ್ತಕ ಒಳಗೊಂಡಿದ್ದು, ಭಾಷೆ, ಸಂಸ್ಕೃತಿ ಕುರಿತ ಅಧ್ಯಯನಕ್ಕೆ ಹೆಚ್ಚು ಸಹಾಯಕವಾಗಲಿದೆ.

‘ತುಳು ಭಾಷೆ, ಸಾಹಿತ್ಯದ ಸ್ವರೂಪ, ವಸ್ತು ಕಾಲಕಾಲಕ್ಕೆ ಬದಲಾದ ಬಗೆಯನ್ನು, ಭಾಷೆಯನ್ನು ಭಿನ್ನ ನೆಲೆಗಳಲ್ಲಿ, ಸೃಜನಾತ್ಮಕವಾಗಿ ಬಳಸುವ ಕುರಿತು ಪಠ್ಯಪುಸ್ತಕದಲ್ಲಿ ಕಟ್ಟಿಕೊಡಬೇಕಾದ ಸವಾಲು ಇತ್ತು. ಆಧುನಿಕ ಹಾಗೂ ಹಿಂದಿನ ತುಳು ಕವಿಗಳ ಕವಿತೆ, ಬರಹಗಾ
ರರ ಲೇಖನ, ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಕರ್ತೃಗಳಿಗಿಂತ ಹೆಚ್ಚಾಗಿ ಕೃತಿಗೆ, ಅದು ಪಠ್ಯಕ್ಕೆ ಪೂರಕವಾಗುವ ಬಗೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆಯನ್ನು ಪಠ್ಯದ ಜತೆ ಅಳವಡಿಸಲು ಹೆಚ್ಚು ಶ್ರಮಿಸಿದೆ.ಅಕಾಡೆಮಿ ವತಿಯಿಂದಲೇ ಮುದ್ರಣದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳುತ್ತಾರೆ ಸಿರಿದೊಂಪ ಪಠ್ಯಪುಸ್ತಕದ ಪ್ರಧಾನ ಸಂಪಾದಕ ಪ್ರೊ. ಬಿ. ಶಿವರಾಮ ಶೆಟ್ಟಿ.

ಉಪನ್ಯಾಸಕರ ಆಯ್ಕೆ: 1976ರಿಂದ ಮಂಗಳೂರು ವಿಶ್ವವಿದ್ಯಾಲಯವು(ಆಗ ಮೈಸೂರು ವಿಶ್ವವಿದ್ಯಾಲಯ) ಕನ್ನಡ ವಿಷಯದಲ್ಲಿ ಪ್ರಾದೇಶಿಕ ಅಧ್ಯಯನದ ನೆಲೆಯಲ್ಲಿ ಮೂರು ಸೆಮಿಸ್ಟರ್‌ಗಳಿಗೆ ತುಳು ಭಾಷೆ, ತುಳು ಜಾನಪದ ಹಾಗೂ ಯಕ್ಷಗಾನವನ್ನು ಬೋಧನಾ ವಿಷಯಗಳಾಗಿ ಆಯ್ಕೆ ಮಾಡಿತ್ತು. ಆ ಅವಧಿಯಲ್ಲಿ ಓದಿದ ವಿದ್ಯಾರ್ಥಿಗಳು ಬಳಿಕ ತುಳುವಿನ ಸಂಶೋಧನೆ, ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ಧಾರೆ. ಹೀಗೆ ತುಳು ಅಧ್ಯಯನವನ್ನು ಮಾಡಿರುವ ಉಪನ್ಯಾಸಕರನ್ನು ನಿರ್ದಿಷ್ಟ ಕಾಲೇಜುಗಳಿಗೆ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.