ADVERTISEMENT

ಮಂಗಳೂರು | ಮಾತೃಮೂಲೀಯ ವ್ಯವಸ್ಥೆಗೆ ‘ಬಾಹ್ಯ’ ಹೊಡೆತ: ಜ್ಯೋತಿ ಚೇಳಾಯ್ರು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:03 IST
Last Updated 18 ಆಗಸ್ಟ್ 2025, 4:03 IST
ಉಮ್ಮಕ್ಕೆ ನೆಂಪು ಕೂಟ ಚಾರಿಟಬಲ್ ಟ್ರಸ್ಟ್‌ನ ಸಂತ ಕವಿ ಕನಕದಾಸ ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ ಹಾಗೂ ಸಂಘಟಕ ವಾಸುದೇವ ಉಚ್ಚಿಲ ಅವರಿಗೆ ಪ್ರದಾನ ಮಾಡಲಾಯಿತು
ಉಮ್ಮಕ್ಕೆ ನೆಂಪು ಕೂಟ ಚಾರಿಟಬಲ್ ಟ್ರಸ್ಟ್‌ನ ಸಂತ ಕವಿ ಕನಕದಾಸ ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ ಹಾಗೂ ಸಂಘಟಕ ವಾಸುದೇವ ಉಚ್ಚಿಲ ಅವರಿಗೆ ಪ್ರದಾನ ಮಾಡಲಾಯಿತು   

ಮಂಗಳೂರು: ಹೊರಗಿನಿಂದ ಬಂದವರ ಅನುಕರಣೆ ಹಾಗೂ ಸಾಂಸ್ಕೃತಿಕ ಪಲ್ಲಟವೂ ಸೇರಿ ಉಂಟಾಗಿರುವ ನವ ಪಿತೃಪ್ರಧಾನ ವ್ಯವಸ್ಥೆಯಿಂದಾಗಿ ತುಳುನಾಡಿನ ಮಾತೃಮೂಲೀಯ ಪರಂಪರೆಗೆ ಪೆಟ್ಟು ಬಿದ್ದಿದೆ ಎಂದು ಲೇಖಕಿ ಜ್ಯೋತಿ ಚೇಳಾಯ್ರು ಅಭಿಪ್ರಾಯಪಟ್ಟರು.

ನಗರದ ಉಮ್ಮಕ್ಕೆ ನೆಂಪು ಕೂಟ ಚಾರಿಟಬಲ್ ಟ್ರಸ್ಟ್‌ ಭಾನುವಾರ ಆಯೋಜಿಸಿದ್ದ ‘ಉಮ್ಮಕ್ಕೆ ನೆಂಪು’ ಮೂರನೇ ವರ್ಷದ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿದ ಅವರು ಹೆಣ್ಣನ್ನು ಗರ್ಭಗುಡಿಯಲ್ಲಿರಿಸಿ ಪೂಜಿಸುವ ಸಮಾಜ ತನ್ನ ಒಳಗೆ ಮೂಡುವ ಚಿಂತನೆಗಳ ಕುರಿತು ಆಲೋಚನೆ ಮಾಡಬೇಕಾದ ಅಗತ್ಯವಿದೆ ಎಂದರು.

ಹೊರಗಿನಿಂದ ಬಂದವರನ್ನು ನೋಡಿ ಅಥವಾ ಬಾಹ್ಯ ಪ್ರಭಾವದಿಂದ ಮಾತೃಮೂಲೀಯ ಸಂಸ್ಕೃತಿ ಮರೆಯಾಗುತ್ತಿದೆ. ಇಲ್ಲದ ಆಚರಣೆಗಳನ್ನು ಮೈಗೂಡಿಸಿಕೊಂಡು ತುಳುನಾಡು ನಿಧಾನಕ್ಕೆ ಪಿತೃಪ್ರಧಾನ ವ್ಯವಸ್ಥೆಯತ್ತ ಜಾರುತ್ತಿದೆ ಎಂದು ಹೇಳಿದ ಅವರು ಮೂಲ ಸಂಸ್ಕೃತಿಯ ಶೋಧ ಮಾಡಿ ಪುನರ್ನಿರ್ಮಾಣ ಮಾಡಬೇಕಾಗಿದೆ ಎಂದರು.

ADVERTISEMENT

ಜಗತ್ತಿನ ಕೆಲವೇ ಕೆಲವು ಸಮುದಾಯದಲ್ಲಿ ಮಾತೃಮೂಲೀಯ ವ್ಯವಸ್ಥೆ ಇದೆ. ಅವುಗಳಲ್ಲಿ ಬಹುತೇಕ ಬುಡಕಟ್ಟು ಸಮುದಾಯ. ತುಳುನಾಡು ಕೂಡ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದ್ದು ಅವುಗಳ ಬೇರುಗಳನ್ನು ಉಳಿಸಬೇಕಾಗಿದೆ. ಇಲ್ಲಿನ ಆರಾಧನೆ, ದೈವ–ದೇವರ ಅಚರಣೆ ಮುಂತಾದ ಎಲ್ಲದರಲ್ಲೂ ಮಾತೃಮೂಲೀಯ ಚಿಂತನೆಗಳಿವೆ. ಎಲ್ಲ ಸಮುದಾಯಗಳ ಅಸ್ಮಿತೆ ಈ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಸ್ತ್ರೀಯನ್ನು ನಗಣ್ಯ ಮಾಡುವ ಸಮಾಜ ಮಾತೃಮೂಲೀಯ ಪದ್ಧತಿಯಿಂದ ಕಲಿಯುವುದು ಸಾಕಷ್ಟಿದೆ ಎಂದು ಅವರು ಹೇಳಿದರು.

ಉಮ್ಮಕ್ಕೆ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಾರಾಮ ತೋಳ್ಪಾಡಿ ಕೌಟುಂಬಿಕ ವ್ಯವಸ್ಥೆಯಲ್ಲಿ ಕೂಡಿ ಬಾಳುವ ಉದಾತ್ತ ಧರ್ಮವನ್ನು ಪಾಲಿಸಿದ ಉಮ್ಮಕ್ಕೆ ಸಮಾಜಕ್ಕೂ ಅದರ ಮಾದರಿಯನ್ನು ಕಲಿಸಿದ್ದಾರೆ. ಇಂಥ ಒಳ್ಳೆಯ ಗುಣಗಳಿಗೆ ಜಾತಿ, ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ. ಮಾತೃಮೂಲೀಯ ಪದ್ಧತಿಗೂ ಇದೇ ರೀತಿ, ಗಡಿಗಳು ಇರಬಾರದು ಎಂದರು. 

ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುತಂಲಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್‌ ಧರ್ಮ, ಕುಲಸಚಿವ ಕೆ.ರಾಜು ಮೊಗವೀರ, ಟ್ರಸ್ಟ್ ಸಂಚಾಲಕ ಪ್ರೊ ಬಿ.ಶಿವರಾಮ ಶೆಟ್ಟಿ ಪಾಲ್ಗೊಂಡಿದ್ದರು. ಎಸ್‌ಎಸ್ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಕನ್ನಡ ಮಾಧ್ಯಮದ ಮೂವರು ವಿದ್ಯಾರ್ಥಿನಿಯರಿಗೆ ತಲಾ ₹ 10 ಸಾವಿರ ನೀಡಲಾಯಿತು. ಕಿನ್ನಿಗೋಳಿ ಸ್ವರಾಂಜಲಿಯ ಅಶ್ವಿಜಾ ಉಡುಪ ಭಾವಗೀತೆ ಗಾಯನ ನಡೆಸಿಕೊಟ್ಟರು.

ಪ್ರಶಸ್ತಿ ಮೊತ್ತ ಸಂಘಟನೆಗಳಿಗೆ ಉಮ್ಮಕ್ಕೆ

ನೆಂಪು ಕೂಟ ಚಾರಿಟಬಲ್ ಟ್ರಸ್ಟ್‌ ಹೊಸದಾಗಿ ಆರಂಭಿಸಿದ ಸಂತ ಕವಿ ಕನಕದಾಸ ಪ್ರಶಸ್ತಿ ಸ್ವೀಕರಿಸಿದ ಸಾಮಾಜಿಕ ಹೋರಾಟಗಾರ ಹಾಗೂ ಸಂಘಟಕ ವಾಸುದೇವ ಉಚ್ಚಿಲ ಪ್ರಶಸ್ತಿ ಮೊತ್ತವಾದ ₹ 30 ಸಾವಿರ ನಗದನ್ನು ಜನಪರ ಸಂಘಟನೆಗಳಿಗೆ ನೀಡುವುದಾಗಿ ಘೋಷಿಸಿದರು. ಈ ಹಿಂದೆ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು ಕೂಡ ಸಂಘಟನೆಗಳಿಗೆ ನೀಡಿದ್ದೆ ಎಂದು ಅವರ ತಿಳಿಸಿದರು. ‘ನಾನು ಜನಪರ ಹೋರಾಟಗಾರ ಎಂದು ಕರೆಸಿಕೊಳ್ಳಲು ಬಯಸುವುದಿಲ್ಲ. ಹೋರಾಟಗಾರರ ಪರಿಚಾರಕನಾಗಿದ್ದೇನೆ ಅಷ್ಟೆ. ಕ್ರಾಂತಿಯ ನಾಯಕರು ಘೋಷಣೆ ಕೂಗುವಾಗ ದನಿಗೂಡಿಸುವುದಷ್ಟೆ ನನ್ನ ಕೆಲಸ ಎಂದು ಅವರು ತಿಳಿಸಿದರು. ಪ್ರಶಸ್ತಿಯು ನಗದು ಸ್ಮರಣಿಕೆ ಮತ್ತು ಫಲಕ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.