ADVERTISEMENT

ಮಂಗಳೂರು| ಅಮೃತ ಸೋಮೇಶ್ವರರ ನಾಟಕಗಳ ಇಂಗ್ಲಿಷ್ ಅನುವಾದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:26 IST
Last Updated 15 ಜನವರಿ 2026, 4:26 IST
ಅಮೃತ ಸೋಮೇಶ್ವರ ಅವರ ಇಂಗ್ಲಿಷ್‌ಗೆ ಅನುವಾದಗೊಂಡ ‘ಗೋಂದೋಳು ಮತ್ತು ಇತರ ನಾಟಕ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು : ಪ್ರಜಾವಾಣಿ ಚಿತ್ರ
ಅಮೃತ ಸೋಮೇಶ್ವರ ಅವರ ಇಂಗ್ಲಿಷ್‌ಗೆ ಅನುವಾದಗೊಂಡ ‘ಗೋಂದೋಳು ಮತ್ತು ಇತರ ನಾಟಕ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು : ಪ್ರಜಾವಾಣಿ ಚಿತ್ರ   

ಮಂಗಳೂರು: ಅಮೃತ ಸೋಮೇಶ್ವರ ಅವರಂತಹ ಮೇರು ಬರಹಗಾರರ ತುಳು ಕೃತಿಗಳು ಇಂಗ್ಲಿಷ್ ಹಾಗೂ ಇತರ ಭಾಷೆಗಳಿಗೆ ಅನುವಾದಗೊಂಡಾಗ ತುಳುವಿನ ಸತ್ವ ಹಾಗೂ ಕಂಪು ತುಳುನಾಡಿನ ಆಚೆಗೂ ಪಸರಿಸುತ್ತದೆ ಎಂದು ನಿವೃತ್ತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.

ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಇಂಗ್ಲಿಷ್, ಕನ್ನಡ ಹಾಗೂ ತುಳು ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಅಮೃತ ಸೋಮೇಶ್ವರ ಅವರ ಇಂಗ್ಲಿಷ್‌ಗೆ ಅನುವಾದಗೊಂಡ ‘ಗೋಂದೋಳು ಮತ್ತು ಇತರ ನಾಟಕ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಒಂದೇ ಕೃತಿಯ ಅನುವಾದವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಪಶ್ಚಿಮ ದೇಶಗಳಲ್ಲಿ ಒಂದು ಪುಸ್ತಕದ 10ರಿಂದ 20 ಮಾದರಿಯ ಅನುವಾದಗಳು ಪ್ರಕಟವಾಗುತ್ತಿವೆ. ನಮ್ಮಲ್ಲಿಯೂ ಅನುವಾದವನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಅಲೋಶಿಯಸ್ ವಿವಿ ಕುಲಪತಿ ಫಾ.ಪ್ರವೀಣ್ ಮಾರ್ಟಿಸ್ ಮಾತನಾಡಿ, ವಿ.ವಿಯಲ್ಲಿ ಈಗಾಗಲೇ ತುಳು ವಿಭಾಗ ಆರಂಭಿಸಲಾಗಿದೆ. ತುಳು ಪೀಠ ಕೂಡ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

ಮಂಗಳೂರು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ಮುದ್ದು ಮೂಡುಬೆಳ್ಳೆ ಅವರು ಅಮೃತರ ನಾಟಕಗಳ ವೈಶಿಷ್ಟ್ಯತೆ ಬಗ್ಗೆ ಮಾತನಾಡಿದರು.

ಕೃತಿಗಳ ಅನುವಾದಕಿ ಸಿಲ್ವಿಯಾ ರೇಗೊ ಅವರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಚೇತನ್ ಸೋಮೇಶ್ವರ, ಅಲೋಶಿಯಸ್ ವಿ.ವಿಯ ಭಾಷಾ ನಿಕಾಯದ ಡೀನ್ ಮಹಾಲಿಂಗ ಭಟ್ ಉಪಸ್ಥಿತರಿದ್ದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಗಳು ಗೊಂದೋಳು ತುಳು ಹಾಡನ್ನು ಪ್ರಸ್ತುತಪಡಿಸಿದರು.

ಉಪನ್ಯಾಸಕಿ ಮೆಲಿಶಾ ಗೋವಿಯಸ್ ಸ್ವಾಗತಿಸಿದರು. ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ವಂದಿಸಿದರು.