
ಮಂಗಳೂರು: ‘ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕುಲಾಧಿಪತಿಗಳಾದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಮ್ಮತಿಸಿದ್ದಾರೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದ ಅವರು, ‘ ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಆರಂಭಿಸಲು ರಾಜ್ಯ ಸರ್ಕಾರವು ಮಂಜೂರಾತಿ ನೀಡಿದೆ. ಇದಕ್ಕೆ ಕುಲಾಧಿಪತಿಯವರ ಸಮ್ಮತಿಯೂ ಸಿಕ್ಕಿರುವುದರಿಂದ ವಿಶ್ವವಿದ್ಯಾನಿಲಯವು ಈ ಸಂಶೋಧನಾ ಕೇಂದ್ರವು ಚಟುವಟಿಕೆಯನ್ನು ಆರಂಭಿಸಬಹುದಾಗಿದೆ’ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟನ್ನು (ಎನ್‌ಎಚ್‌ಇಕ್ಯುಎಫ್) ಅಳವಡಿಸಿಕೊಳ್ಳಲಾಗಿದ್ದು, ಅದಕ್ಕೂ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಭಾರತೀಯ ಸಾಂಸ್ಕೃತಿಕ ಸಂಪರ್ಕ ಮಂಡಳಿ (ಐಸಿಸಿಆರ್) ವಿದ್ಯಾರ್ಥಿವೇತನ ಯೋಜನೆಯಡಿ 2025–26ನೇ ಸಾಲಿಗೆ ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ನೀಡುವುದಕ್ಕೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ವಿದೇಶಿ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ: ‘ಕೆಲವು ವಿದೇಶಿ ವಿದ್ಯಾರ್ಥಿಗಳು ವೀಸಾ ಅವಧಿ ಮುಗಿದ ಬಳಿಕವೂ ಇಲ್ಲೇ ಉಳಿಯುತ್ತಾರೆ. ಅಂತಹ ವಿದ್ಯಾರ್ಥಿಗಳ ಮೇಲೆ ಸ್ನಾತಕೋತ್ತರ ವಿಭಾಗಗಳು ನಿಗಾ ಇಡಲಿವೆ. ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ನಿಯಮ ಹಾಗೂ ನಿಬಂಧನೆಗಳನ್ನು ಪರಿಚಯಿಸಲು ಸೇತುಬಂಧ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ’ ಎಂದು ಕುಲಪತಿ ತಿಳಿಸಿದರು.
‘ಪಿಎಚ್.ಡಿ ಸಂಶೋಧನೆ ನಡೆಸುತ್ತಿರುವ ವಿದೇಶಿ ವಿದ್ಯಾರ್ಥಿಗಳು, ಪ್ರಬಂಧವನ್ನು ಸಲ್ಲಿಕೆ ಮಾಡಿದ ಬಳಿಕ ನಡೆಯುವ ಮೌಕಿಕ ಪರೀಕ್ಷೆಯನ್ನು ಆನ್ಲೈನ್‌ನಲ್ಲಿ ಎದುರಿಸಲು ಅನುಮತಿ ನೀಡುವಂತೆ ಕೋರಿಕೆ ಸಲ್ಲಿಸುತ್ತಿದ್ದರು. ಇದಕ್ಕೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ಮೌಖಿಕ ಪರೀಕ್ಷೆಗಳಿಗೂ ಅವರು ಖುದ್ದಾಗಿ ಹಾಜರಾಗುವುದನ್ನು ಕಡ್ಡಾಯಗೊಳಿಸಲು ವಿಶ್ವವಿದ್ಯಾನಿಲಯವು ನಿರ್ಧರಿಸಿದೆ. ವಿದೇಶಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ನಿಗಾ ಇಟ್ಟು, ಈ ಬಗ್ಗೆ ವಿಶ್ವವಿದ್ಯಾನಿಲಯದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಎಲ್ಲ ವಿಭಾಗಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಪ್ರೊ.ಪಿ.ಎಲ್.ಧರ್ಮ, ತಿಳಿಸಿದರು.
ಶಾಶ್ವತವಾಗಿ ಮುಚ್ಚಲಾದ ಕಾಲೇಜುಗಳು
ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಹೊಂದಿದ್ದ 22 ಖಾಸಗಿ ಪದವಿ ಕಾಲೇಜುಗಳನ್ನು ವಿದ್ಯಾರ್ಥಿಗಳ ಕೊರತೆ ಕಾರಣಕ್ಕಾಗಿ ಶಾಶ್ವತವಾಗಿ ಮುಚ್ಚಲು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಕಾಲೇಜುಗಳ ವಿವರ ಇಂತಿದೆ: ಆಬಾ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ಸುರತ್ಕಲ್; ಅಂಜುಮನ್ ಪ್ರಥಮ ದರ್ಜೆ ಕಾಲೇಜು ಮಂಗಳೂರು; ಅಮೃತಾ ಕಾಲೇಜು ಪಡೀಲ್ ಮಂಗಳೂರು; ಸಿಲಿಕಾನ್ ಕಾಲೇಜ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಕೊಂಚಾಡಿ ಮಂಗಳೂರು; ಮೋಗ್ಲಿಂಗ್ ಇನ್‌ಸ್ಟಿಟ್ಯೂಟ್ ಆಫ್ ಜರ್ಮನ್ ಲ್ಯಾಂಗ್ವೇಜ್ ಬಲ್ಮಠ ಮಂಗಳೂರು; ಸರ್ಸ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸ್ ಮಂಗಳೂರು; ರೊಸಾರಿಯೊ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಬೋಳಾರ ಮಂಗಳೂರು; ಕರಾವಳಿ ಕಾಲೇಜ್ ಆಫ್ ಎಜುಕೇಷನ್ ಮಂಗಳೂರು; ಪ್ರೇಮಕಾಂತಿ ಕಾಲೇಜ್ ಆಫ್ ಎಜುಕೇಷನ್ ಮಂಗಳೂರು; ಸಪ್ಲೆನ್ಷಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ; ಶ್ರೀಶಾರದಾ ಮಹಿಳಾ ಕಾಲೇಜು ಸುಳ್ಯ; ಶ್ರೀರಾಮಕುಂಜೇಶ್ವರ ಕಾಲೇಜು ರಾಮಕುಂಜ; ಹಝರತ್ ಸಯ್ಯದ್ ಮದನಿ ಬನಥ ಮಹಿಳಾ ಕಾಲೇಜು ಉಳ್ಳಾಲ ಮಂಗಳೂರು; ಸೇಂಟ್ ಸೆಬಾಸ್ಟಿಯನ್ ಕಾಲೇಜ್ ಆಫ್ ಕಾಮರ್ಸ್ ಉಳ್ಳಾಲ ಮಂಗಳೂರು; ಸೇಂಟ್ ಥಾಮಸ್ ಕಾಲೇಜ್ ಬೆಳ್ತಂಗಡಿ; ಮಾರ್ ಇವಾನಿಯೋಸ್ ಕಾಲೇಜು ಕಡಬ; ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ; ಮೂಕಾಂಬಿಕಾ ಪ್ರಥಮ ದರ್ಜೆ ಕಾಲೇಜು ಬೈಂದೂರು; ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಕಾಲೇಜು ಕುಂದಾಪುರ; ಬಿ.ಡಿ.ಶೆಟ್ಟಿ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಐರೋಡಿ ಉಡುಪಿ; ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜು ಕಾಪು; ಕೃಷ್ಣಾಬಾಯಿ ವಾಸುದೇವ ಶೆಣೈ ಸ್ಮಾರಕ ಕಾಲೇಜು ಕಟಪಾಡಿ
‘ನ್ಯಾಕ್ ಮಾನ್ಯತೆ–ಮುಂದಿನ ವರ್ಷ ಅರ್ಜಿ’
‘ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ಮಾನ್ಯತೆಗಾಗಿ ವಿಶ್ವವಿದ್ಯಾನಿಲಯವು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಸಲ್ಲಿಸಲಿದೆ. ಈ ಮಾನ್ಯತೆ ಪಡೆಯುವ ಪ್ರಕ್ರಿಯೆಗೆ ಯಾವ ರೀತಿ ಪೂರ್ವ ಸಿದ್ಧತೆ ನಡೆಸಬೇಕಾಗುತ್ತದೆ ಎಂಬ ಕುರಿತು ಬೋಧಕ ಸಿಬ್ಬಂದಿಗೆ ಮಾರ್ಗದರ್ಶನ ಮಾಡಲು ಹಾಗೂ ಅದರ ಮೌಲ್ಯಮಾಪನ ಪ್ರಕ್ರಿಯೆ ಬಗ್ಗೆ ತಿಳಿವಳಿಕೆ ನೀಡಲು ನ್ಯಾಕ್ ನಿರ್ದೇಶಕರನ್ನು ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಲಾಗಿದೆ’ ಎಂದು ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.