ADVERTISEMENT

ತುಳು ಗಾನಲೋಕಕ್ಕೆ ‘ದಾಂಪತ್ಯಗೀತೆ’ಯ ಕವಿ ಸುಬ್ರಾಯ ಚೊಕ್ಕಾಡಿ ಹಾಡು

ಪ್ರಕೃತಿ ಮಾತೆಯೊಂದಿಗೆ ‘ಮುನಿಸು ತರವಲ್ಲ’ ಎಂಬ ಆಶಯದ ಸುಬ್ರಾಯ ಚೊಕ್ಕಾಡಿ ಅವರ ಹಾಡು ಸಿದ್ಧ

ವಿಕ್ರಂ ಕಾಂತಿಕೆರೆ
Published 24 ಜುಲೈ 2025, 10:55 IST
Last Updated 24 ಜುಲೈ 2025, 10:55 IST
ತಮ್ಮದೇ ತುಳು ಹಾಡಿಗೆ ಸುಬ್ರಾಯ ಚೊಕ್ಕಾಡಿ ಅವರ ಅಭಿನಯ
ತಮ್ಮದೇ ತುಳು ಹಾಡಿಗೆ ಸುಬ್ರಾಯ ಚೊಕ್ಕಾಡಿ ಅವರ ಅಭಿನಯ   

ಮಂಗಳೂರು: ‘ಮುನಿಸು ತರವೇ...’ ಎಂಬ ದಾಂಪತ್ಯ ಗೀತೆಯ ಮೂಲಕ ಪ್ರಸಿದ್ಧರಾಗಿರುವ, ‘ಸಂಜೆಯ ರಾಗಕೆ ಬಾನು ಕೆಂಪಾಗಿಸಿ’ ಕನ್ನಡದಲ್ಲಿ ಗಟ್ಟಿಯಾದ ಸಾಹಿತ್ಯ ಕೃಷಿ ಮಾಡಿರುವ ಸುಬ್ರಾಯ ಚೊಕ್ಕಾಡಿ ಅವರು ಈಗ ತುಳು ಗಾನಲೋಕಕ್ಕೆ ಪ್ರವೇಶಿಸುತ್ತಿದ್ದಾರೆ. ಅವರ ತುಳು ಗೀತೆಯೊಂದು ಇದೇ ಮೊದಲ ಬಾರಿ ಸಂಗೀತ ಸಂಯೋಜನೆಗೆ ಒಳಪಟ್ಟಿದ್ದು ಇದರ ವಿಡಿಯೊ ಜು. 26ರಿಂದ ಸಹೃದಯರ ಕಿವಿಗೆ ಇಂಪು ನೀಡಲಿದೆ.

ತುಳು ಸಾಹಿತ್ಯ ಮತ್ತು ಸಂಸ್ಕೃತಿ ಪಸರಿಸುವ ಕಾರ್ಯದಲ್ಲಿ ತೊಡಗಿರುವ ಬೆಂಗಳೂರಿನ ‘ಐಲೇಸಾ’ ಸಂಸ್ಥೆ ಸುಬ್ರಾಯ ಚೊಕ್ಕಾಡಿ ಅವರ ‘ಏರಾಯೆ ಏರ್‌?’ (ಯಾರವನು?) ಎಂಬ ಹಾಡನ್ನು ಸಿದ್ಧಪಡಿಸಿದೆ. ವಿ.ಮನೋಹರ್ ಅವರು ಸಂಗೀತ ಸಂಯೋಜನೆ ಮಾಡಿರುವ ಹಾಡನ್ನು ರಮೇಶ್ಚಂದ್ರ ಮತ್ತು ಸಂಗಡಿಗರು ಹಾಡಿದ್ದಾರೆ. 

ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜನಿಸಿದ ಸುಬ್ರಾಯ ಅವರು ಹಸಿರು ಪರಿಸರದಿಂದ ಪ್ರಭಾವಿತರಾಗಿ ಕಾವ್ಯ ರಚನೆಯಲ್ಲಿ ತೊಡಗಿದವರು. ಕನ್ನಡದಲ್ಲಿ ಅವರ ಕವನಗಳು ಹಾಡುಗಳಾಗಿ ಜನಮನಕ್ಕೆ ತಲುಪಿವೆ. ತುಳುವಿನಲ್ಲಿ ಕೆಲವು ಕವನಗಳನ್ನು ಬರೆದಿದ್ದರೂ ಹೆಚ್ಚು ಪ್ರಸಿದ್ಧಿ ಗಳಿಸಲಿಲ್ಲ. 85 ಹರಯದಲ್ಲಿ ಅವರಿಂದ ತುಳು ಕವಿತೆ ಬರೆಸಿ ಸಂಗೀತಕ್ಕೆ ಒಳಪಡಿಸಿದ ‘ಐಲೇಸಾ’ ತಂಡದವರು ಚೊಕ್ಕಾಡಿಯವರಿಂದ ಅಭಿನಯವನ್ನೂ ಮಾಡಿಸಿದ್ದಾರೆ.

ADVERTISEMENT

‘ಸುಳ್ಯದಂಥ ತುಳು ಪ್ರದೇಶದಲ್ಲಿ ಬಾಳಿ, ಬರೆದ ಕವಿಯೊಬ್ಬರ ತುಳು ಕವಿತೆಗಳು ಪ್ರಸಿದ್ಧಿಗೆ ಬರಲಿಲ್ಲ ಎಂಬ ವಿಷಯ ಬೇಸರ ಉಂಟುಮಾಡಿತು. ಹೀಗಾಗಿ ಸಂಗೀತ ಸಂಯೋಜನೆಗೆ ಒಳಪಡಿಸಿ ಚಿತ್ರೀಕರಣ ಮಾಡುವುದಕ್ಕೆಂದೇ ಅವರಿಂದ ಹಾಡು ಬರೆಸಿದೆವು. ಪ್ರಕೃತಿಯನ್ನು ಕೊಂಡಾಡುವ ಹಾಡು ಬರೆದುಕೊಟ್ಟರು. ಏರಾಯೆ ಏರ್ ಎಂದು ಕೇಳುವ ಕವಿ ನೀರು, ತೊರೆ, ಗಾಳಿ, ಹಣ್ಣು, ಹಕ್ಕಿ, ಹೂ, ಬಿಸಿಲು ಇತ್ಯಾದಿಗಳನ್ನು ಕರುಣಿಸಿದವ ಯಾರು, ಆತನಿಗೆ ನಿತ್ಯವೂ ಕೈಮುಗಿಯಬೇಕು ಎಂದು ಆಶಿಸುತ್ತಾರೆ’ ಎಂದು ‘ಐಲೇಸ’ದ ಸ್ಥಾಪಕ ಸದಸ್ಯ ಶಾಂತಾರಾಮ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಹಾಡಿನಲ್ಲಿ ಚೊಕ್ಕಾಡಿಯವರನ್ನೂ ಪಾತ್ರಧಾರಿ ಮಾಡಬೇಕು ಎಂಬ ಬಯಕೆ ಮೂಡಿತು. ಅವರನ್ನು ಕೇಳಿದಾಗ ಸಂಕೋಚಪಟ್ಟರು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಸತತ ಪ್ರಯತ್ನದ ನಂತರ ಮನೆಯ 20 ಸೆಕೆಂಡುಗಳ 3 ಕ್ಲಿಪ್‌ಗಳಿಗೆ ಒಪ್ಪಿಕೊಂಡರು. ಅವರ ಅಭಿನಯದ ಜೊತೆಯಲ್ಲಿ ಪ್ರಕೃತಿಯನ್ನು ಬಣ್ಣಿಸುವ ನೃತ್ಯ ಸಂಯೋಜನೆಯೂ ಇದೆ’ ಎಂದು ಶಾಂತಾರಾಮ ಶೆಟ್ಟಿ ಹೇಳಿದರು.

ನನ್ನ ತುಳು ಕವಿತೆಯೊಂದು ಹಾಡಾತ್ತಿರುವುದು ಸಂತೋಷ ತಂದಿದೆ. ಕನ್ನಡ ಮತ್ತು ಅರೆಭಾಷೆಯಲ್ಲಿ ಬರೆದ ನನ್ನ ತುಳು ಹೇಗಿದೆಯೋ ಗೊತ್ತಿಲ್ಲ. ಆದ್ದರಿಂದ ಸಂಕೋಚವೂ ಕಾಡುತ್ತಿದೆ. ಈ ಹಾಡು ನನ್ನನ್ನು ತ್ರಿಭಾಷಾ ಕವಿಯನ್ನಾಗಿಸಿದೆ.

–ಸುಬ್ರಾಯ ಚೊಕ್ಕಾಡಿ ಕವಿ

ಈ ಹಾಡಿನಲ್ಲಿ ಪ್ರಕೃತಿಯ ಬಣ್ಣನೆ ಇದೆ. ಪರಿಸರವನ್ನು ಉಳಿಸಬೇಕಾದ ಕಾಳಜಿಯೂ ಇದೆ. ಒಳ್ಳೆಯ ಆಶಯದ ಕವಿತೆಯೊಂದನ್ನು ಸಂಯೋಜಿಸಿ ಹಾಡಿನ ರೂಪ ಕೊಡಲು ಸಾಧ್ಯವಾದದ್ದರಲ್ಲಿ ಸಂತೋಷವಿದೆ.

–ಶಾಂತಾರಾಮ ಶೆಟ್ಟಿ ಐಲೇಸದ ಸ್ಥಾಪಕ ಸದಸ್ಯ

ಜಗದಗಲದಲ್ಲಿ ಉದ್ಘಾಟನೆ 26ರಂದು ಸಂಜೆ 7.30ಕ್ಕೆ ’ಝೂಮ್‌’ನಲ್ಲಿ ಹಾಡು ಬಿಡುಗಡೆ ಆಗಲಿದೆ. ಐಲೇಸಾದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿಯಿಂದ ಜಾಯಿನ್ ಆಗಿ ಉದ್ಘಾಟನೆ ಮಾಡುವರು. ಸಿನಿಮಾ ನಿರ್ದೇಶಕ ಶಂತೋಷ್ ಮಾಡ ಬೆಂಗಳೂರಿನಿಂದ ಮತ್ತು ಸುಬ್ರಾಯ ಚೊಕ್ಕಾಡಿ ಅವರು ಸುಳ್ಯದಿಂದ ಪಾಲ್ಗೊಳ್ಳುವರು ಎಂದು ಐಲೇಸಾ ತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.