ADVERTISEMENT

ಹಲಸಿನ ಹಣ್ಣಿನ ಮೇಲೆ ಎಲ್ಲರ ಕಣ್ಣು

ಹಲಸು ಹಬ್ಬದಲ್ಲಿ ಭರ್ಜರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 12:53 IST
Last Updated 28 ಮೇ 2022, 12:53 IST
ಮಂಗಳೂರಿನಲ್ಲಿ ನಡೆದ ಹಲಸು ಹಬ್ಬದಲ್ಲಿ ಹೊಸ ತಳಿ ‘ಮಂಗಳ ಅರ್ಲಿ’ಯನ್ನು ಬಿಡುಗಡೆಗೊಳಿಸಲಾಯಿತು.
ಮಂಗಳೂರಿನಲ್ಲಿ ನಡೆದ ಹಲಸು ಹಬ್ಬದಲ್ಲಿ ಹೊಸ ತಳಿ ‘ಮಂಗಳ ಅರ್ಲಿ’ಯನ್ನು ಬಿಡುಗಡೆಗೊಳಿಸಲಾಯಿತು.   

ಮಂಗಳೂರು: ಮಾಂಬಳ, ಹೋಳಿಗೆ, ಹಪ್ಪಳ, ಚಿಪ್ಸ್, ಉಪ್ಪು ಸೊಳೆ ಹೀಗೆ ಎಲ್ಲವೂ ಗ್ರಾಹಕರನ್ನು ಸೆಳೆಯುತ್ತಿದ್ದವು. ಇವೆಲ್ಲದರ ಆಕರ್ಷಣೆ ಮೀರಿ ಹಲಸಿನ ಹಣ್ಣಿನ ಘಮ ಇಡೀ ಪರಿಸರವನ್ನು ಆಹ್ಲಾದಗೊಳಿಸಿತ್ತು. ದಪ್ಪ ಸೊಳೆಯ, ರುಚಿಯಾದ ಹಣ್ಣಿನ ಸೊಳೆಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು.

ಹಲಸಿನ ಹಣ್ಣಿನ ರಾಶಿಗೆ ಜೇನುನೊಣಗಳಂತೆ ಮುತ್ತಿದ್ದ ಜನರು, ಪೈಪೋಟಿಯಲ್ಲಿ ಹಣ್ಣನ್ನು ಖರೀದಿಸುತ್ತಿದ್ದರು. ನಗರದ ಬಾಳಂಭಟ್ ಸಭಾಭವನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಹಲಸು ಹಬ್ಬದಲ್ಲಿ ಕಂಡುಬಂದ ದೃಶ್ಯಗಳಿವು.

ಸಾವಯವ ಕೃಷಿಕ ಗ್ರಾಹಕ ಬಳಗ ಹಾಗೂ ಪ್ರಣವ ಸೌಹಾರ್ದ ಸಹಕಾರಿ ಜಂಟಿಯಾಗಿ ಆಯೋಜಿಸಿದ್ದ ಹಬ್ಬದಲ್ಲಿ ಗ್ರಾಮೀಣ ಭಾಗದ ಹಲಸು ಬೆಳೆಗಾರರು, ಸಾವಯವ ಉತ್ಪನ್ನಗಳ ಮಾರಾಟಗಾರರು ಭಾಗವಹಿಸಿದ್ದರು. 65ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲಸು, ಮಾವು, ಬೆಲ್ಲ ಸೇರಿದಂತೆ ವಿವಿಧ ಉತ್ಪನ್ನಗಳು ಮಾರಾಟಕ್ಕಿದ್ದವು. ಬಿಸಿಬಿಸಿಯಾದ ಹಲಸಿನ ಹೋಳಿಗೆಯನ್ನು ಖರೀದಿಸಿ, ಗ್ರಾಹಕರು ಸವಿದರು.

ADVERTISEMENT

‘ಏಳು ವರ್ಷಗಳಿಂದ ಹಲಸಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಹಪ್ಪಳ, ಮಾಂಬಳ, ಚಿಪ್ಸ್‌ಗೆ ಒಳ್ಳೆಯ ಬೇಡಿಕೆ ಇದೆ. ಇವು ಮಾತ್ರವಲ್ಲ, ಹಲಸಿನಿಂದ ತಯಾರಿಸಿದ ಎಲ್ಲ ಉತ್ಪನ್ನಗಳನ್ನು ಗ್ರಾಹಕರು ಪ್ರೀತಿಯಿಂದ ಖರೀದಿಸುತ್ತಾರೆ’ ಎಂದು ಮಾರಾಟದ ಗಡಿಬಿಡಿಯಲ್ಲೇ, ಕಾರ್ಕಳದ ಪ್ರಭಾಕರ ಪ್ರಭು ಪ್ರತಿಕ್ರಿಯಿಸಿದರು.

ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು, ಗಡ್ಡೆ–ಗೆಣಸು, ಗೋಧಿ, ಬೆಲ್ಲ, ರಾಗಿಯಿಂದ ತಯಾರಿಸಿದ ಸಾವಯವ ಉತ್ಪನ್ನಗಳನ್ನು ಹುಬ್ಬಳ್ಳಿ–ಧಾರವಾಡ, ಗದಗ, ರಾಯಚೂರು ಮೊದಲಾದ ಭಾಗಗಳಿಂದ ರೈತರು, ಉತ್ಪಾದಕರು ತಂದಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ರಕರ್ತ ನಾ. ಕಾರಂತ ಪೆರಾಜೆ, ಕೃಷಿ ಸಾಧಕಿ ಹಾಸನದ ಹೇಮಾ ಅನಂತ್, ಪ್ರಮುಖರಾದ ಜಿ.ಆರ್.ಪ್ರಸಾದ್, ಸರ್ವೇಶ್ ರಾವ್, ಎಸಿಪಿ ಪಿ.ಎ.ಹೆಗಡೆ, ಬೆಳೆಗಾರ ಅನಿಲ್‌ ಬಳಂಜ, ‘ಓಜಸ್‌’ ಅಡಿಕೆ ಮಾಲ್ಟ್ ಉತ್ಪಾದಕ ಎಸ್.ಎಂ. ಹೆಗಡೆ ಇದ್ದರು. ಸರ್ವೇಶ್‌ ರಾವ್ ಅವರು ಬೆಳೆಸಿದ ‘ಮಂಗಳ ಅರ್ಲಿ’ ಹೊಸ ಹಲಸಿನ ತಳಿ ಬಿಡುಗಡೆಗೊಳಿಸಲಾಯಿತು. ಹಲಸು, ವಿವಿಧ ತಳಿಗಳ ಗಿಡಗಳು ಮಾರಾಟಕ್ಕಿದ್ದವು.

ಚಿಪ್ಸ್ ಕಟಿಂಗ್ ಯಂತ್ರ

ಮಹಾರಾಷ್ಟ್ರದ ಗಣೇಶ್ ಬಂಬೆ ಅವರು ತಂದಿದ್ದ ಹಲಸಿನ ಚಿಪ್ಸ್ ಕಟಿಂಗ್ ಯಂತ್ರ ವಿಶೇಷ ಆಕರ್ಷಣೆಯಾಗಿತ್ತು. ಇದರಲ್ಲಿ ಎರಡು ಮಾದರಿಗಳು ಇದ್ದವು. ಸೊಳೆಯಲ್ಲಿ ಯಂತ್ರದಲ್ಲಿ ಹಾಕಿದರೆ, ಚಿಪ್ಸ್‌ ಮಾಡಲು ಬೇಕಾದ ಗಾತ್ರದಲ್ಲಿ ಸೊಳೆಗಳು ಕಟ್ ಆಗಿ ಬೀಳುತ್ತವೆ. ಇಬ್ಬರು ಮಾಡುವ ಕೆಲಸವನ್ನು ಯಂತ್ರ ಮಾಡುತ್ತದೆ. ಹಲಸಿನ ಚಿಪ್ಸ್ ಈಗ ಉದ್ಯಮವಾಗಿದ್ದು, ಈ ಯಂತ್ರದಿಂದ ಕೆಲಸವನ್ನು ಸುಲಭಗೊಳಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು. ಸಣ್ಣ ಯಂತ್ರದ ಬೆಲೆ ₹ 6,500 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.