ADVERTISEMENT

ಕೇಳುವವರಿಲ್ಲ ಈ ರಸ್ತೆಯ ದುರವಸ್ಥೆ

ಪುತ್ತೂರು ತಾಲ್ಲೂಕಿನ ಉದಯಗಿರಿ-ಬೇರಿಕೆ ರಸ್ತೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:43 IST
Last Updated 30 ಅಕ್ಟೋಬರ್ 2020, 10:43 IST
ತೀರಾ ಹದಗೆಟ್ಟಿರುವ ಉದಯಗಿರಿ-ಬೇರಿಕೆ ರಸ್ತೆ
ತೀರಾ ಹದಗೆಟ್ಟಿರುವ ಉದಯಗಿರಿ-ಬೇರಿಕೆ ರಸ್ತೆ   

ಪುತ್ತೂರು: ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಆರ್ಯಾಪು ಗ್ರಾಮ ವ್ಯಾಪ್ತಿಯ ರಸ್ತೆಯೊಂದು ತೀರಾ ನಾದುರಸ್ತಿಯಲ್ಲಿದ್ದು, ಹಲವಾರು ವರ್ಷಗಳಿಂದ ಕ್ಷೇತ್ರದ ಶಾಸಕರು ಸೇರಿದಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಆ ಭಾಗದ ಜನತೆಯ ಅಳಲು.

ಆರ್ಯಾಪು ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗುವ ಉದಯಗಿರಿ-ಬೇರಿಕೆ ರಸ್ತೆ ತೀರಾ ಹದಗೆಟ್ಟಿದೆ. ಸಂಪ್ಯ ಅನ್ನಪೂರ್ಣೇಶ್ವರಿ ದೇವಳದ ಸಮೀಪದಿಂದ ಬೇರಿಕೆಗೆ ಹೋಗುವ ಮೂರು ಕಿ.ಮೀ. ವ್ಯಾಪ್ತಿಯ ಈ ರಸ್ತೆಯ ಮುಕ್ಕಾಲು ಕಿ.ಮೀ. ಸಂಚಾರಕ್ಕೆ ಅಯೋಗ್ಯವಾಗಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ಹರಿದು, ಕೆಸರು ಗದ್ದೆಯಂತಾಗುತ್ತದೆ. ದೊಡ್ಡ ಹೊಂಡಗಳಾಗಿ, ಸಂಚಾರ ಕಷ್ಟಕರವಾಗಿದೆ.

ಮಳೆಗಾಲದಲ್ಲಿ ರಸ್ತೆಯ ಅಲ್ಲಲ್ಲಿ ನೀರು ಒಸರುತ್ತದೆ. ಚರಂಡಿ ಇಲ್ಲದ ಕಾರಣ ಒಸರು ನೀರಿನೊಂದಿಗೆ ಮಳೆನೀರು ರಸ್ತೆ ಮೇಲೆಯೇ ಹರಿಯುತ್ತದೆ. ಗುಡ್ಡದಿಂದ ಹರಿದು ಬರುವ ಮಳೆ ನೀರು ಸಹ ರಸ್ತೆ ಮಧ್ಯೆಯೇ ಹರಿದು ಹೋಗುತ್ತದೆ. ಈ ಭಾಗದ ಮಂದಿಗೆ ಈ ರಸ್ತೆಯನ್ನು ಬಿಟ್ಟರೆ ಪರ್ಯಾಯ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಈ ರಸ್ತೆಯನ್ನು ಅವಲಂಬಿಸಿರುವ ಸುಮಾರು 50 ಕುಟುಂಬಗಳು ನರಕಯಾತನೆ ಅನುಭವಿಸುತ್ತವೆ.

ADVERTISEMENT

ಈ ರಸ್ತೆಯು ಪುತ್ತೂರು ನಗರಸಭೆಯ 30ನೇ ವಾರ್ಡ್‌ ವ್ಯಾಪ್ತಿಯಲ್ಲಿದೆ. ನಗರಸಭೆಗೆ ಸೇರ್ಪಡೆಗೊಂಡಿರುವ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಕೆಲಸ ಮಾತ್ರ ಆಗುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.