ADVERTISEMENT

ಉಡುಪಿ ಸೀರೆ ಜಾಗೃತಿಗೆ 1₹ ಕೋಟಿ ವೆಚ್ಚ

ಜವಳಿ ಅಭಿವೃದ್ಧಿ ಆಯುಕ್ತ ಹಾಗೂ ಕೈ ಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಡಾ. ಎಂ. ಆರ್. ರವಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 13:37 IST
Last Updated 25 ಸೆಪ್ಟೆಂಬರ್ 2019, 13:37 IST
ಕಿನ್ನಿಗೋಳಿಯಲ್ಲಿ ಉಡುಪಿ ಸೀರೆಯ ಜಾಗೃತಿ ಕುರಿತು ಕೈ ಮಗ್ಗ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಡಾ.ಎಂ.ಆರ್.ರವಿ ಸಂವಾದ ನಡೆಸಿದರು
ಕಿನ್ನಿಗೋಳಿಯಲ್ಲಿ ಉಡುಪಿ ಸೀರೆಯ ಜಾಗೃತಿ ಕುರಿತು ಕೈ ಮಗ್ಗ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಡಾ.ಎಂ.ಆರ್.ರವಿ ಸಂವಾದ ನಡೆಸಿದರು   

ಮೂಲ್ಕಿ: ‘ಇಳಕಲ್, ಮೊಳಕಾಳ್ಮೂರು, ಬಾಗಲಕೋಟೆಯ ಗುಳೇದಗುಡ್ಡದ ಕಣದಂತೆ ಉಡುಪಿ ಸೀರೆಯ ಪ್ರಚಾರ ಹಾಗೂ ಜಾಗೃತಿಗಾಗಿ ₹1 ಕೋಟಿಮೊತ್ತವನ್ನು ಮೀಸಲಾಗಿರಿಸಿದ್ದು, ಕೇಂದ್ರ ಸರ್ಕಾರದ ಕ್ಲಸ್ಟರ್ ಮೂಲಕ ಉಡುಪಿ ಸೀರೆಯ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ಜವಳಿ ಅಭಿವೃದ್ಧಿ ಆಯುಕ್ತ ಹಾಗೂ ಕೈ ಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಡಾ. ಎಂ. ಆರ್. ರವಿ ಹೇಳಿದರು.

ಕಿನ್ನಿಗೋಳಿಯಲ್ಲಿ ಜಿಐ ನಡಿ ನೋಂದಣಿಯಾದ ಉಡುಪಿ ಸೀರೆಯ ಜಾಗೃತಿ ಕುರಿತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೈ ಮಗ್ಗ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳನ್ನು ಬುಧವಾರ ವೀಕ್ಷಿಸಿ ಅವರು ನೇಕಾರರೊಂದಿಗೆ ಸಂವಾದ ನಡೆಸಿದರು.

‘ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಇದ್ದ ಸಂದರ್ಭದಲ್ಲೂ ಉಡುಪಿ ಸೀರೆಯ ಬಗ್ಗೆ ಕೇಳಿರಲಿಲ್ಲ. ನಮ್ಮ ಉತ್ಪಾದನೆಯ ಬಗ್ಗೆ ನಮಗೇ ಹೆಮ್ಮೆ ಗರ್ವ ಇರಬೇಕು. ಮೊದಲು ನಮ್ಮೂರಿನ ಉತ್ಪಾದನೆ ಎಂದು ಇಲ್ಲಿನವರು ಉಡಬೇಕು. ಬೇಡಿಕೆ ಹೆಚ್ಚಿಸಬೇಕು. ಉತ್ತಮ ಗುಣ ಮಟ್ಟದ ಹತ್ತಿನೂಲಿನಿಂದ ಮಾಡುವ ಗಂಜಿ ಹಾಕುವ ತಂತ್ರಜ್ಞಾನದಿಂದಾಗಿ ವಿಶಿಷ್ಟವಾಗಿರುವ ಉಡುಪಿ ಸೀರೆಯ ಬೆಳವಣಿಗೆಗೆ ವಿನ್ಯಾಸಗಾರರ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸಲಿದೆ. ನೇಕಾರಿಕೆಯಲ್ಲಿ ತೊಡಗಿಸಿಕೊಂಡವರ ಬದುಕನ್ನು ಉತ್ತಮಪಡಿಸುವುದು ಹೇಗೆಂದು ಚಿಂತನೆ ಆಗಬೇಕಾಗಿದ್ದು, ಉಡುಪಿ ಸೀರೆ ಅಭಿಯಾನದ ಮೂಲಕ ಸರ್ಕಾರ ಈ ಕಡೆ ಗಮನ ಹರಿಸುವಂತೆ ಮಾಡಿದ್ದೀರಿ’ ಎಂದು ಹೇಳಿದರು.

ADVERTISEMENT

ಕೈ ಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಎಸ್. ಪ್ರಕಾಶ್, ಉಡುಪಿ ಸೀರೆ ಅಭಿಯಾನ ನಿರತ ಕಾರ್ಕಳ ಕದಿಕೆ ಟ್ರಸ್ಟ್‌ನ ಮಮತಾ ರೈ, ಚಿಕ್ಕಪ್ಪ ಶೆಟ್ಟಿ, ಉಭಯ ಜಿಲ್ಲೆಗಳ ನೇಕಾರರ ಸಹಕಾರ ಸಂಘಗಳ ಅಧ್ಯಕ್ಷ ತಾಳಿಪಾಡಿಯ ಆನಂದ ಶೆಟ್ಟಿಗಾರ್, ಶಿವಳ್ಳಿಯ ಸಂಜೀವ ಶೆಟ್ಟಿಗಾರ್, ಪಡುಪಣಂಬೂರಿನ ಮಾಧವ ಶೆಟ್ಟಿಗಾರ್, ಉಡುಪಿಯ ಅತ್ಯಾರ್ಥ ಅಬ್ನತೇಜರ್, ಮಿಜಾರಿನ ಮೋಹನ ಶೆಟ್ಟಿಗಾರ್, ಬ್ರಹ್ಮಾವರದ ಬಾಲಕೃಷ್ಣ ಶೆಟ್ಟಿಗಾರ್, ಬಸ್ರೂರಿನ ಅಣ್ಣಯ್ಯ ಶೆಟ್ಟಿಗಾರ್, ಕಿನ್ನಿಗೋಳಿ ಮಾಧವ ಶೆಟ್ಟಿಗಾರ್, ಸದಾನಂದ ಕಾಂಚನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.