ADVERTISEMENT

ಬ್ರಹ್ಮಕಲಶದ ಸಂಭ್ರಮದಲ್ಲಿ ಉಜಿರೆ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:34 IST
Last Updated 1 ಮಾರ್ಚ್ 2026, 8:34 IST
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ   

ಉಜಿರೆ: ಸುಮಾರು ಒಂದು ಸಾವಿರ ವರ್ಷ ಇತಿಹಾಸ ಮತ್ತು ಪರಂಪರೆ ಹೊಂದಿರುವ ಬಂಗಾಡಿ ಸೀಮೆಯ ಪ್ರಧಾನ ವಿಷ್ಣುಕ್ಷೇತ್ರವಾಗಿ, ಭಕ್ತರ ಶ್ರದ್ಧಾಕೇಂದ್ರವಾದ ಉಜಿರೆಯ ಜನಾರ್ದನ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾರ್ಚ್ 3ರಿಂದ 11ರವರೆಗೆ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ.

800 ವರ್ಷಗಳ ಹಿಂದೆ ಉಡುಪಿಯ ಮಧ್ವಾಚಾರ್ಯರು ಉಜಿರೆಗೆ ಬಂದು ಇಲ್ಲಿನ ವಿದ್ವಾಂಸರೊಂದಿಗೆ ಚರ್ಚಿಸಿ, ಕಲ್ಲಿನ ಮೇಲೆ ಕುಳಿತು ‘ಕರ್ಮನಿರ್ಣಯ’ ಎಂಬ ಗ್ರಂಥ ರಚಿಸಿದ್ದರು ಎಂದು ಇಲ್ಲಿನ ಇತಿಹಾಸದಿಂದ ತಿಳಿದು ಬರುತ್ತದೆ. ಆ ಕಲ್ಲು ಈಗಲೂ ಇದ್ದು, ದೇವಸ್ಥಾನದ ಆಗ್ನೇಯ ದಿಕ್ಕಿನಲ್ಲಿ ಮಧ್ವ ಮಂಟಪ ರಚಿಸಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ದಿ.ವಿಜಯರಾಘವ ಪಡ್ವೆಟ್ನಾಯ ಅವರ ಸ್ಮರಣಾರ್ಥ ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ‘ವಿಜಯಗೋಪುರ’ವನ್ನು ಮಾರ್ಚ್‌ 4 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸುವರು.

ADVERTISEMENT

ಪ್ರಸ್ತುತ ಅಮೆರಿಕದಲ್ಲಿರುವ, ಮೂಲತಃ ಉಜಿರೆಯವರಾದ ಕಿರಣ್ ರಾವ್ ಕುಟುಂಬಸ್ಥರು ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ರಹ್ಮರಥ ಹಾಗೂ ಉಜಿರೆಯ ಗಣೇಶ ಗೌಡ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಪುಷ್ಪರಥವನ್ನು ದೇವರಿಗೆ ಕಾಣಿಕೆಯಾಗಿ ಅರ್ಪಿಸಲಿದ್ದಾರೆ.

ಡಿ.ವೀರೇಂದ್ರ ಹೆಗ್ಗಡೆ ಅವರ ಗೌರವ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ತಿಳಿಸಿದ್ದಾರೆ.

ಪ್ರತಿದಿನ ಕೃಷ್ಣಾನುಗ್ರಹ ಮತ್ತು ಸುದರ್ಶನ ಎಂಬ ಎರಡು ಪ್ರಧಾನ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ರಥಬೀದಿಯಲ್ಲಿರುವ ‘ಸುನಾದ’ ಭಜನಾ ಕುಟೀರದಲ್ಲಿ 61 ತಂಡಗಳ ಭಕ್ತರಿಂದ ನಿರಂತರ ಭಜನಾ ಸೇವೆ ನಡೆಯಲಿದೆ. ಪ್ರತಿ ದಿನ ಸಂಜೆ 5ರಿಂದ ನಾಟಕ, ನೃತ್ಯ, ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಮಾರ್ಚ್ 2ರಿಂದ 10ರ ವರೆಗೆ ಪ್ರತಿ ದಿನ ಬೆಳಿಗ್ಗೆ 10 ಉಜಿರೆ ಗ್ರಾಮಸ್ಥರು ದೇವಸ್ಥಾನಕ್ಕೆ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ಸಮರ್ಪಿಸಲಿದ್ದಾರೆ. ಅನ್ನದಾಸೋಹಕ್ಕಾಗಿ ಪ್ರತ್ಯೇಕ ಪಾಕಶಾಲೆ ಹಾಗೂ ತಾತ್ಕಾಲಿಕ ಭವನ ನಿರ್ಮಿಸಲಾಗಿದೆ. ಎರಡು ವಾರಗಳಿಂದ ಪ್ರತಿದಿನ ಇನ್ನೂರು ಮಂದಿ ಸ್ವಯಂ-ಸೇವಕರು ಶ್ರಮದಾನ ಮಾಡುತ್ತಿದ್ದಾರೆ.

ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ
ಬ್ರಹ್ಮಕಲಶೋತ್ಸವ ವೈಭವದಲ್ಲಿ ಉಜಿರೆ ಜನಾರ್ದನ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.