ADVERTISEMENT

ಉಜಿರೆ: ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸದಾ ಸಿದ್ಧ ಎಂದ ಹಿರಿಯ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:07 IST
Last Updated 22 ಸೆಪ್ಟೆಂಬರ್ 2025, 5:07 IST
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು   

ಉಜಿರೆ: ಎಸ್‌ಡಿಎಂನ ಮಂಗಳೂರು, ಬೆಂಗಳೂರು, ಹಾಸನ, ಉಡುಪಿ, ಉಜಿರೆ, ಧಾರವಾಡ ಹಾಗೂ ಮೈಸೂರಿನಲ್ಲಿರುವ 56 ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಉಡುಪಿ ಎಸ್‌ಡಿಎಂ  ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಎಂ.ಮೋಹನ ಆಳ್ವ, ‘ವೀರೇಂದ್ರ ಹೆಗ್ಗಡೆ ಅವರು ನನ್ನ ಸಾರ್ಥಕ ಬದುಕಿನ ಪ್ರೇರಕರು, ಮಾರ್ಗದರ್ಶಕರು ಹಾಗೂ ಗುರುಗಳಾಗಿದ್ದರೆ. ರಾಜನೂ, ಋಷಿಯೂ ಆಗಿರುವ ಹೆಗ್ಗಡೆ ಅವರು ನಿಜವಾದ ಅರ್ಥದಲ್ಲಿ ರಾಜರ್ಷಿ’ ಎಂದರು.

ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸಗಳಿಗೆ ಹೆಗ್ಗಡೆಯವರ ಸೇವೆ ಮತ್ತು ಕೊಡುಗೆ ಶ್ಲಾಘನೀಯ. ಉಡುಪಿಯಲ್ಲಿರುವ ಎಸ್‌ಡಿಎಂ ಆಯುರ್ವೇದ ಕಾಲೇಜು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದರು.

ಹೆಗ್ಗಡೆ ಹಾಗೂ ಧರ್ಮಸ್ಥಳದ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಮತ್ತು ವದಂತಿಗಳನ್ನು ಖಂಡಿಸಿದ ಅವರು, ಹಿರಿಯ ವಿದ್ಯಾರ್ಥಿಗಳೆಲ್ಲರೂ ಧರ್ಮ ಸಿಪಾಯಿಗಳಾಗಿ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸದಾ ಸಿದ್ಧ ಎಂದರು.

ಪುಣೆಯ ಕಾನೂನು ಕಾಲೇಜಿನ ಡೀನ್ ಪ್ರೊ.ಶಶಿಕಲಾ ಗುರುಪುರ, ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಡಾ.ಅನಿಲ್, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿದರು.

ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್ ಭಾಗವಹಿಸಿದ್ದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ ಸ್ವಾಗತಿಸಿದರು. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ ವಂದಿಸಿದರು. ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಿಇಒ ಬಿ.ಪಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಠರಾವು ಮಂಡನೆ: ಎಲ್ಲ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಸದೃಢಗೊಳಿಸಿ ಪ್ರತಿವರ್ಷ ಆಯಾ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಸುವುದು, ಹಿರಿಯ ವಿದ್ಯಾರ್ಥಿಗಳು ಸದಾ ಹೆಗ್ಗಡೆಯವರ ಬೆಂಬಲಕ್ಕೆ ಬದ್ಧರಾಗಿರುವುದು, ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವ ಕುರಿತು ಕದ್ರಿ ನವನೀತ ಶೆಟ್ಟಿ ಠರಾವು ಮಂಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಮೂಹ ಮಾಧ್ಯಮಗಳಲ್ಲಿ ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳನ್ನು ತಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರೊ.ಶಶಿಕಲಾ ಗುರುಪುರ ಮಾತನಾಡಿದರು
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿದರು
ಕಾರ್ಯಕ್ರಮದಲ್ಲಿ ಭಾಗವಹಸಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು
ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು
ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.