
ಉಳ್ಳಾಲ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ಮುಂಭಾಗದ ಚರಂಡಿ ಸಮಸ್ಯೆಗೆ ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಆಸ್ಪತ್ರೆ ಸುತ್ತಲಿನ ಪರಿಸರದಲ್ಲಿ ರೋಗ ಭೀತಿ ಉಂಟಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಗಂಬಿಲ ರಿಕ್ಷಾ ಚಾಲಕರು ತುಳುನಾಡು ರಕ್ಷಣಾ ವೇದಿಕೆ ಜೊತೆಗೆ ಪ್ರತಿಭಟನೆ ನಡೆಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ಕಟ್ಟಡ ತಲೆಎತ್ತಿದ ಕೂಡಲೇ ಅಭಿವೃದ್ಧಿ ಕೇಂದ್ರ ಎನ್ನಲು ಸಾಧ್ಯವಿಲ್ಲ. ಮೂಲಸೌಕರ್ಯ ಉತ್ತಮ ಗುಣಮಟ್ಟದಲ್ಲಿ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಕಟ್ಟಡಗಳಿಂದ ಹೊರಬರುತ್ತಿರುವ ತ್ಯಾಜ್ಯ ಚರಂಡಿಯಲ್ಲಿ ಸಂಗ್ರಹಗೊಂಡು ಇಲ್ಲಿನ ರಿಕ್ಷಾ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳ್ಮ ಗ್ರಾಮ ಪಂಚಾಯಿತಿ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯಿತಿ ಇದಕ್ಕೆ ಜವಾಬ್ದಾರಿಯಾಗಿದ್ದು, ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.
ರಿಕ್ಷಾ ಚಾಲಕರಾದ ಸತೀಶ್, ಕಾರ್ತಿಕ್ ಪಂಡಿತ್‌ಹೌಡ್, ಪುರುಷೋತ್ತಮ್ ಬಗಂಬಿಲ, ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮಾತನಾಡಿ, ಸಂಜೆ ವೇಳೆ ಸೊಳ್ಳೆಗಳ ಸಮಸ್ಯೆ ಇದ್ದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗೂ ಮನವಿ ಮಾಡಿದ್ದೇವೆ. ಆದರೆ ಸ್ಪಂದನೆ ಸಿಕ್ಕಿಲ್ಲ ಎಂದರು.
ಪ್ರಮುಖರಾದ ಜ್ಯೋತಿಕಾ ಜೈನ್, ಕ್ಲೀಟಸ್ ಲೋಬೊ, ರಕ್ಷಿತ್ ಕುಡುಪು, ಶಾರದಾ ಶೆಟ್ಟಿ, ಸುಭಾಷ್, ತೌಫಿಕ್, ಸುನೀಲ್, ದಿನೇಶ್, ಪುರುಷೋತ್ತಮ್, ಎಸ್.ರಾಜ, ಶಶಿಧರ್, ಪ್ರವೀಣ್, ರಾಜೇಶ್, ಮೋಹನ್, ಪ್ರಸನ್ನ, ಮುಸ್ತಾಫ, ಕಿಶೋರ್, ನಿಸಾರ್, ಸಿರಿಲ್ ಡಿಸೋಜ, ಸುರೇಶ್ ಶೆಟ್ಟಿ, ಕಿರಣ್ ಗಟ್ಟಿ ಕುತ್ತಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.