ADVERTISEMENT

ವ್ಯಸನಿಗಳಿಗೆ ಜಾತಿ- ಧರ್ಮ ಇರುವುದಿಲ್ಲ: ಮುಹಮ್ಮದ್ ಕುಂಞಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:17 IST
Last Updated 10 ಆಗಸ್ಟ್ 2022, 4:17 IST
ಉಳ್ಳಾಲ ಅಲೇಕಳ ಮದನಿ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವ್ಯಸನ ಜನಜಾಗೃತಿ ಕಾರ್ಯಕ್ರಮ.
ಉಳ್ಳಾಲ ಅಲೇಕಳ ಮದನಿ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವ್ಯಸನ ಜನಜಾಗೃತಿ ಕಾರ್ಯಕ್ರಮ.   

ಉಳ್ಳಾಲ: ‘ನಮ್ಮ ಬದುಕಿನಲ್ಲಿ ಸದುದ್ದೇಶಗಳಿದ್ದರೆ ಯಾರೂ ನಮ್ಮನ್ನು ದಾರಿ ತಪ್ಪಿಸಲಾಗುವುದಿಲ್ಲ. ನಾವು ಬದುಕಿನಲ್ಲಿ ಇನ್ನೊಬ್ಬರಿಗೆ ಮಾಡಿದ ಸಣ್ಣ ಸಹಾಯ ನಮ್ಮ ಜೀವನದ ಕೊನೆಯ ತನಕವೂ ಸದಾ ನೆನಪಿನಲ್ಲಿರುತ್ತದೆ. ಮಕ್ಕಳಿಗೆ ಉಪದೇಶ ಕೊಡುವ ಬದಲು ಪ್ರೀತಿಯ ವಾತಾವರಣದಲ್ಲಿ ಬೆಳಸಿದರೆ ಅಂತಹ ಮಕ್ಕಳು ಖಂಡಿತವಾಗಿಯೂ ದಾರಿ ತಪ್ಪಲಾರರು’ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಹೇಳಿದರು.

ಉಳ್ಳಾಲ ಸದ್ಭಾವನಾ ವೇದಿಕೆ ಮತ್ತು ಪೊಸಕುರಲ್ ಬಳಗದ ಆಶ್ರಯದಲ್ಲಿ ಉಳ್ಳಾಲ ಅಲೇಕಳ ಮದನಿ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ವ್ಯಸನ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ದ್ರವ್ಯ ಚಟಕ್ಕೆ ಬಲಿಯಾದವರಿಗೆ ಯಾವುದೇ ಜಾತಿ- ಧರ್ಮ ಇರುವುದಿಲ್ಲ. ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಭೇದವೂ ಗೊತ್ತಾಗುವುದಿಲ್ಲ ಎಂದರು.

ದೇರಳೆಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜಿನ ಮನೋರೋಗ ಪ್ರಾಧ್ಯಾಪಕ ರವೀಂದ್ರ ಕಾರ್ಕಳ ಮಾತನಾಡಿ, ‘ಒಮ್ಮೆ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ಅದು ತಲೆಯಿಂದ ಕಾಲಿನವರೆಗೆ ಮನುಷ್ಯನ ಅಂಗಾಂಗ, ಆರೋಗ್ಯ ಮತ್ತು ವ್ಯಕ್ತಿತ್ವವನ್ನು ನಾಶಮಾಡುತ್ತದೆ’ ಎಂದರು.

ADVERTISEMENT

ಸದ್ಭಾವನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅನ್ವತ್ ರಚಿಸಿದ ಮಾದಕ ದ್ರವ್ಯ ವ್ಯಸನದ ಜಾಗೃತಿ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಅಲೇಕಳ ಮದನಿ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಟಿ.ಇಸ್ಮಾಯಿಲ್ ಅನಿಸಿಕೆ ವ್ಯಕ್ತಪಡಿಸಿದರು. ಉಳ್ಳಾಲ ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿದ್ದರು. ಸದ್ಭಾವನಾ ವೇದಿಕೆಯ ಗೌರವಾಧ್ಯಕ್ಷ ಸದಾನಂದ ಬಂಗೇರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಇಸಾಕ್ ಕಲ್ಲಾಪು ಸ್ವಾಗತಿಸಿದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಹಬೀಬ್ ರಹ್ಮಾನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.