
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕಾಪಿಕಾಡು ಎಂಬಲ್ಲಿ ಸೋಮವಾರ ಬೆಳಿಗ್ಗೆ ಖಾಸಗಿ ಶಾಲೆಯ ಬಸ್‌ನ ಹಿಂಬದಿಗೆ ಮೀನು ಸಾಗಾಟದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಏಳು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ತಲಪಾಡಿಯ ಶಾರದಾ ನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜಿಗೆ ಸೇರಿದ ಬಸ್ ಕಾಪಿಕಾಡಿನ ಹೆದ್ದಾರಿ ಅಂಚಿನಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿ ತಲಪಾಡಿ ಕಡೆಗೆ ತೆರಳುತ್ತಿದ್ದಾಗ ಅವಘಡ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್‌ನ ಹಿಂಭಾಗದ ಸೀಟುಗಳು ಕಿತ್ತು ಹೋಗಿವೆ.
ಗೋವಾದಿಂದ ಕೇರಳದ ಕಡೆಗೆ ಕ್ಯಾಂಟರ್‌ನಲ್ಲಿ ಮೀನು ಸಾಗಿಸುತ್ತಿದ್ದ ಕುಂದಾಪುರ ಮೂಲದ ಚಾಲಕ ಸಂಜೀವ ನಿದ್ದೆ ಮಂಪರಿನಲ್ಲಿದ್ದ ಪರಿಣಾಮ ಅಪಘಾತ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ. ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯವಾಗಿದ್ದು ಆತನನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರೀಕ್ಷೆ ನಡೆಯುತ್ತಿದ್ದುದರಿಂದ ಬಸ್‌ನಲ್ಲಿ 24 ವಿದ್ಯಾರ್ಥಿಗಳಿದ್ದರು. ಕ್ಯಾಂಟರ್ ಚಾಲಕ ಸಂಜೀವ ಸಣ್ಣ ಪುಟ್ಟ ಗಾಯಗೊಂಡಿದ್ದು, ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನಂತೂರು - ತಲಪಾಡಿ ಹೆದ್ದಾರಿ ವಿಸ್ತರಣೆಗೊಂಡು ದಶಕ ಕಳೆದರೂ ಈ ಹೆದ್ದಾರಿಯಲ್ಲಿ ಸಮರ್ಪಕ ಸರ್ವಿಸ್ ರಸ್ತೆ ಇಲ್ಲದೆ ಶಾಲಾ ವಾಹನಗಳು, ಖಾಸಗಿ ಬಸ್ಸುಸ್‌ಗಳು ಮುಖ್ಯ ಹೆದ್ದಾರಿಯ ಅಂಚಿನಲ್ಲೇ ನಿಲ್ಲಿಸಿ ಜನರನ್ನ ಹತ್ತಿಸಿಕೊಳ್ಳುತ್ತವೆ. ಹೆದ್ದಾರಿಯಲ್ಲಿ ಭಾರಿ ವೇಗದಲ್ಲಿ ಸಾಗುವ ಸರಕು ವಾಹನಗಳ ಚಾಲಕರಿಗೆ ಇದರ ಅರಿವಿಲ್ಲದ ಕಾರಣ ಅಪಘಾತಗಳು ನಡೆಯುತ್ತಲೇ ಇವೆ. ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.