ADVERTISEMENT

ನರಿಂಗಾನ: ನವೀಕೃತ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 6:23 IST
Last Updated 10 ಜೂನ್ 2021, 6:23 IST
ನರಿಂಗಾನ ಗ್ರಾಮ ಪಂಚಾಯಿತಿಯ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.
ನರಿಂಗಾನ ಗ್ರಾಮ ಪಂಚಾಯಿತಿಯ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.   

ಕೊಣಾಜೆ: ‘ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗಟ್ಟಾದರೆ ಗ್ರಾಮದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನರಿಂಗಾನದ 30 ಮಂದಿ ಸದಸ್ಯರು ತಮಗೆ ಬರುವ ಗೌರವಧನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿ, ಸನ್ಮಾನಿಸಿರುವುದು ಮಾದರಿ ಬೆಳವಣಿಗೆ’ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ನರಿಂಗಾನ ಗ್ರಾಮ ಪಂಚಾಯಿತಿಯ ನವೀಕೃತಗೊಂಡ ಕಟ್ಟಡದ ಉದ್ಘಾಟನೆ ಹಾಗೂ ನರಿಂಗಾನ ಗ್ರಾಮದ ಕೊರೊನಾ ವಾರಿಯರ್ಸ್‌ ಹಾಗೂ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಗ್ರಾಮದ ಅಭಿವೃದ್ಧಿಗಾಗಿ ಮತದಾರರು ಒಂದೇ ಪಕ್ಷದ ಸದಸ್ಯರನ್ನು ಬೆಂಬಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಆಗದಂತೆ ಆಡಳಿತ ಸಮಿತಿ ಒಗ್ಗಟ್ಟಾಗಿ ಕಾರ್ಯಾಚರಿಸಬೇಕು. ಜುಲೈನಲ್ಲಿ ನೂತನ ಪಡಿತರ ಅಂಗಡಿಯು ಗ್ರಾಮದ ಎಲ್ಲರಿಗೂ ಅನುಕೂಲವಾಗುವ ಜಾಗದಲ್ಲಿ ಕಡ್ಡಾಯವಾಗಿ ಆರಂಭವಾಗಬೇಕು’ ಎಂದರು.

ADVERTISEMENT

‘ಕೊರೊನಾ ವಾರಿಯರ್‌ಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ರಾಜ್ಯಕ್ಕೆ ಮಾದರಿ. ಆಶಾ ಕಾರ್ಯಕರ್ತೆಯರು ತಾವು ಸಂಗ್ರಹಿಸುವ ಮನೆ ಮನೆಯ ಡೇಟಾವನ್ನು ಪಂಚಾಯಿತಿಗೂ ನೀಡಬೇಕು. ಅಧಿಕಾರಿಗಳು ಅದನ್ನು ದಾಖಲೆಯಾಗಿ ಇಟ್ಟುಕೊಳ್ಳಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಶೆಟ್ಟಿ, ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ, ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಪದ್ಮನಾಭ ನರಿಂಗಾನ, ಅಭಿವೃದ್ಧಿ ಅಧಿಕಾರಿ ರಜನಿ, ಕಾರ್ಯದರ್ಶಿ ನಳಿನಿ, ಅಂಗನವಾಡಿ ಮೇಲ್ವಿಚಾರಿಕಿ ಸವಿತಾ, ನವೀನ್., ವೈದ್ಯಾಧಿಕಾರಿ ಮಹಮ್ಮದ್ ಫಯಾಝ್ ಉಪಸ್ಥಿತರಿದ್ದರು.

ಏಳು ಆಶಾ ಕಾರ್ಯಕರ್ತೆಯರು, ಇಬ್ಬರು ಆರೋಗ್ಯ ಸಹಾಯಕಿಯರು, ಈಜುಪಟು ನಾಗರಾಜ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.