
ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮಹಿಳೆಯ ಮೇಲಿನ ಹಲ್ಲೆ ಹಾಗೂ ಅವಮಾನ ಪ್ರಕರಣವನ್ನು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಖಂಡಿಸಿದೆ.
ಜ.6ರಂದು ರಾತ್ರಿ ಸುಮಾರು 8 ಗಂಟೆಗೆ ಸುನೀತಾ ಲೋಬೊ ಅವರು ಪತಿ ಮತ್ತು ಮಕ್ಕಳ ಜತೆ ಪಜೀರು ಗ್ರಾಮದ ಲೇಡಿ ಆಫ್ ಮರ್ಸಿ ಹಾಲ್‌ನಲ್ಲಿ ನಡೆದ ರೋಸ್ ಕಾರ್ಯಕ್ರಮಕ್ಕೆ ತೆರಳಿದ್ದರು. ಊಟ ಮಾಡಿದ ಬಳಿಕ, ರಾತ್ರಿ ಸುಮಾರು 10.45ರ ವೇಳೆಗೆ ಹಾಲ್ ಒಳಗೆ ನಿಂತಿದ್ದಾಗ ವಲೆರಿನ್ ಡಿಸೋಜ ಎಂಬಾತ ಸುನೀತಾ ಲೋಬೊ ಅವರನ್ನು ದುರುದ್ದೇಶದಿಂದ ನೋಡಿದ್ದ. ಈ ಬಗ್ಗೆ ಸುನೀತಾ ಪ್ರಶ್ನಿಸಿದ್ದು, ಆತ ಬೆದರಿಕೆ ತೆರಳಿದ್ದ. ಸ್ವಲ್ಪ ಸಮಯದ ನಂತರ ಬಂದ ಆತ ಸುನೀತಾ ಅವರಿಗೆ ಬಾಟಲಿಯಿಂದ ಹಲ್ಲೆ ನಡೆಸಿದ್ದು, ಬಲ ಕಣ್ಣಿನ ಕೆಳಭಾಗದಲ್ಲಿ ಗಂಭೀರವಾದ ಊತ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲಿಗೆ ಬಂದ ಸುನೀತಾ ಅವರ ಪತಿ, ಪುತ್ರನಿಗೂ ಹಲ್ಲೆ ನಡೆಸಿದ್ದಾನೆ. ಜೀವ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವಲೆರಿನ್ ಡಿಸೋಜ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ನೇತೃತ್ವದಲ್ಲಿ ಮನವಿ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.