ADVERTISEMENT

ಸಂತೋಷ್ ಆತ್ಮಹತ್ಯೆ ಕುರಿತು ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ: ಬೊಮ್ಮಾಯಿ

ಅಭಿವೃದ್ಧಿ ಹೆಸರಲ್ಲಿ ಮುಂದಿನ ಚುನಾವಣೆ: ಸಿಎಂ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 9:14 IST
Last Updated 12 ಏಪ್ರಿಲ್ 2022, 9:14 IST
   

ಮಂಗಳೂರು:ಸಂತೋಷ್ ಆತ್ಮಹತ್ಯೆಯ ಕುರಿತು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಿದ್ದಾರೆ. ತನಿಖೆಯ ಪ್ರಾಥಮಿಕ ಮಾಹಿತಿಯ ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದೇವೇಳೆ, ಮುಂದಿನ ಚುನಾವಣೆಯನ್ನು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿಯೇ ಎದುರಿಸಲಿದ್ದೇವೆ ಎಂದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಮತ್ತು ಅಭಿವೃದ್ಧಿ ಪೈಕಿ ಬಿಜೆಪಿ ಯಾವ ವಿಚಾರದಲ್ಲಿ ಚುನಾವಣೆ ಎದುರಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.

ಈ ಹಿಂದೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅಥವಾ ಬೇರೆ ಸಚಿವರು ರಾಜೀನಾಮೆ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಆದರೆ ಪ್ರತಿ ಜೀವಕ್ಕೂ ಮೌಲ್ಯ ಇದೆ. ವ್ಯಕ್ತಿಗೆ ಅವರದ್ದೇ ಜೀವನ ಇದೆ. ಅದನ್ನು ಗೌರವಿಸಬೇಕು. ನಾವು ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದರು.

ADVERTISEMENT

ಈಶ್ವರಪ್ಪ ವಿರುದ್ಧದ ಆರೋಪವನ್ನು ಅವರೇ ಅಲ್ಲಗಳೆದಿದ್ದಾರೆ. ಎಲ್ಲದಕ್ಕೂ ತನಿಖಾ ವರದಿ ಬಂದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು.

ಕರಾವಳಿಯಲ್ಲಿ ಈ ಹಿಂದೆಯೂ ಗಲಭೆ, ಗದ್ದಲಗಳು ನಡೆದಿದ್ದವು. ಎರಡೂ ಕಡೆಯಿಂದ ಕ್ರಿಯೆ- ಪ್ರತಿಕ್ರಿಯೆ ನಡೆದಿತ್ತು. ಆದರೆ, ಯಾರೇ ಕಾನೂನು ಕೈಗೆತ್ತಿಕೊಂಡರೂ ಸರ್ಕಾರ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮಂಗಳವಾರ ಮತ್ತು ಬುಧವಾರ ಬಿಜೆಪಿ ಸಭೆ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.