ADVERTISEMENT

ಉಪ್ಪಿನಂಗಡಿ: ಎರಡನೇ ದಿನವೂ ಸಿಗದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 3:04 IST
Last Updated 23 ಫೆಬ್ರುವರಿ 2023, 3:04 IST
ಆನೆ ಸೆರೆ ಹಿಡಿಯುವ ಕಾರ್ಯಕ್ಕೆ ಬಳಸಲಾದ ಸಾಕಾನೆ
ಆನೆ ಸೆರೆ ಹಿಡಿಯುವ ಕಾರ್ಯಕ್ಕೆ ಬಳಸಲಾದ ಸಾಕಾನೆ   

ಉಪ್ಪಿನಂಗಡಿ: ಕಡಬ ತಾಲ್ಲೂಕಿನ ರೆಂಜಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆ ಎರಡನೇ ದಿನವೂ ವಿಫಲವಾಗಿದೆ.

ಕಾಡಾನೆ ಸೆರೆ ಹಿಡಿಯುವ ಸಲುವಾಗಿ ತರಿಸಲಾಗಿದ್ದ ಸಾಕಾನೆಗಳು ಮಂಗಳವಾರದಿಂದ ಕಾರ್ಯಾಚರಣೆ ಆರಂಭಿ ಸಲಾಗಿ, ಬುಧವಾರವೂ ಮುಂದುವರಿದಿತ್ತು. ಮಂಗಳವಾರ ರಾತ್ರಿ ಐತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಹಾನಿಗೊಳಿಸಿತ್ತು. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕಾರ್ಯಚರಣೆ ತಂಡ ಬುಧವಾರ ಬೆಳಗ್ಗೆ ಐತ್ತೂರು ಗ್ರಾಮದ ಅಜನ ಎಂಬಲ್ಲಿನ ರಬ್ಬರ್ ತೋಟದ ಬಳಿ ಕಾಡಾನೆ ಇರುವುದು ಪತ್ತೆಯಾಗಿತ್ತು.

ಕಾರ್ಯಾಚರಣೆ ಆರಂಭಿಸಿದ ಇಲಾಖೆ ಪೇರಡ್ಕದಿಂದ ಸಾಕಾನೆ ತಂಡಗಳನ್ನು ಐತ್ತೂರಿಗೆ ಕರೆತಂದು ಕಾರ್ಯಚರಣೆ ಆರಂಭಿಸಲಾಯಿತು. ಎರಡು ಕಾಡಾನೆ ಇರುವುದು ಕಂಡುಬಂದಿದೆ. ಗುರಿ ತಪ್ಪಿದ ಮದ್ದುಗುಂಡು: ಸಂಜೆ ವೇಳೆ ಕಾರ್ಯಚರಣೆ ತಂಡದವರು ಕಾಡಾನೆ ಮೇಲೆ ಮದ್ದು ಗುಂಡು ಪ್ರಯೋಗ ಮಾಡಿದ್ದು ಅದು ಗುರಿ ತಪ್ಪಿದೆ, ಬಳಿಕ 2ನೇ ಬಾರಿಯೂ ಮದ್ದು ಗುಂಡು ಗುರಿ ತಪ್ಪಿದೆ. ಈ ಮಧ್ಯೆ ಕಾಡಾನೆ ಕಾರ್ಯಾಚರಣೆ ತಂಡದ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾದ ಘಟನೆಯೂ ನಡೆದಿದ್ದು, ಆ ಬಳಿಕ ಬುಧವಾರದ ಕಾರ್ಯಚರಣೆ ಸ್ಥಗಿತ ಮಾಡಿ ಸಾಕಾನೆಗಳನ್ನು ಪೇರಡ್ಕದ ಶಿಬಿರಕ್ಕೆ ಕರೆತರಲಾಯಿತು.

ADVERTISEMENT

ಜನ ಸೇರುವಿಕೆ ಹಿನ್ನಡೆ: ಕಾರ್ಯಾ ಚರಣೆಗೆ ಕುತೂಹಲಿಗರು ಬಾರಿ ಸಂಖ್ಯೆಯಲ್ಲಿ ಸೇರುತ್ತಿರುವುದು ಕಾರ್ಯಾ ಚರಣೆಗೆ ಹಿನ್ನಡೆ ಆಗುತ್ತಿದೆ ಎನ್ನಲಾಗಿದೆ. ಜನ ಸೇರುತ್ತಿರುವ ಬಗ್ಗೆ ಕಾಡಾನೆಗೆ ಗ್ರಹಿಕೆಯಾಗುತ್ತಲೇ ಅದು ಸ್ಥಳದಿಂದ ಪಥ ಬದಲಿಸುತ್ತಿರುವುದರಿಂದ ಕಾಡಾನೆ ಸೆರೆ ಹಿಡಿಯಲು ಹಿನ್ನಡೆ ಆಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.