
ಉಪ್ಪಿನಂಗಡಿ: ಉಪ್ಪಿನಂಗಡಿ-ಗುರುವಾಯನಕೆರೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚುವ ಕಾಮಗಾರಿಗೆ ಅನುದಾನ ಮಂಜೂರು ಆಗಿ ವಾರದ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಹಾಕಿದ್ದ ಡಾಂಬರು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ರಸ್ತೆ ಮತ್ತೆ ಹದಗೆಟ್ಟಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಹದಗೆಟ್ಟಿದ್ದ ರಸ್ತೆಯನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಮತ್ತು ವಾಹನ ಚಾಲಕ-ಮಾಲೀಕರು ಪ್ರತಿಭಟನೆ ನಡೆಸಿದ್ದರು. ಬಳಿಕ ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ನೇತ್ರಾವತಿ ಸೇತುವೆವರೆಗಿನ 9.17 ಕಿ.ಮೀ. ಉದ್ದದ ರಸ್ತೆ ದುರಸ್ತಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ₹ 31.87 ಲಕ್ಷ ಅನುದಾನ ಮಂಜೂರು ಆಗಿತ್ತು. ಅದರಂತೆ ಈಗಾಗಲೇ ಕಾಮಗಾರಿ ಮುಗಿಸಲಾಗಿದೆ.
ಸರ್ಕಾರದ ಹಣವನ್ನು ಪೋಲು ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಕಾಮಗಾರಿ ನಡೆಸಿದವರು ನಿರ್ಲಕ್ಷ್ಯ ತೋರಿದ್ದಾರೆ. ಸಾರ್ವಜನಿಕರು, ವಾಹನ ಚಾಲಕರು ವರ್ಷಗಳಿಂದ ಅನುಭವಿಸುತ್ತಿದ್ದ ತೊಂದರೆ, ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ ಎಂಬ ದೂರು ವ್ಯಕ್ತವಾಗಿದೆ.
ರಸ್ತೆಯಲ್ಲಿ ಇದ್ದ ಗುಂಡಿಗಳಿಗೆ ಹಾಕಿರುವ ಡಾಂಬರು ಬಹುತೇಕ ಕಡೆ ಕಿತ್ತು ಹೋಗಿದೆ. ಡಾಂಬಾರುನಿಂದ ಬೇರ್ಪಟ್ಟಿರುವ ಜಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಾಣುತ್ತಿದೆ. ದೊಡ್ಡ ಹೊಂಡಗಳಿಗೆ ಮಾತ್ರ ಡಾಂಬರು ಹಾಕಲಾಗಿದ್ದು, ಉಳಿದ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ ಎಂದು ವಾಹನ ಚಾಲಕರು ದೂರಿದ್ದಾರೆ.
ಪ್ರತಿಭಟನೆ ಅನಿವಾರ್ಯ: ರಸ್ತೆ ದುರಸ್ತಿ ಕೇವಲ ದಾಖಲೆ ಮತ್ತು ಫೋಟೊಗಳಿಗೆ ಸೀಮಿತವಾಗಿದೆ. ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ನೆರವಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮತ್ತು ಗುಣಮಟ್ಟದಿಂದ ಮರುದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರು ಮತ್ತು ವಾಹನ ಚಾಲಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ವಾಹನ ಚಾಲಕರು ತಿಳಿಸಿದ್ದಾರೆ.
ನಿಯಮಗಳನ್ನು ಗಾಳಿಗೆ ತೂರಿದ್ದಾರೆ– ಯೂಸುಫ್ ಪೆದಮಲೆ: ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಮಾಡುವಾಗ ಹೊಂಡಗಳಿಗೆ 1 ಇಂಚ್‌ನಷ್ಟು ಜಲ್ಲಿ ಹಾಕಬೇಕು. ಅದರ ಮೇಲೆ ರೋಲರ್ ಓಡಿಸಬೇಕು. ಆ ಬಳಿಕ ಸೀಲ್ ಕೋಟ್ ಡಾಂಬಾರು ಹಾಕಬೇಕು. ಆ ಬಳಿಕ ಮತ್ತೆ ಡಾಂಬಾರು ಹಾಕಿದರೆ ಮಾತ್ರ ಅದು ಗಟ್ಟಿಯಾಗಿ ನಿಲ್ಲುತ್ತದೆ. ಆದರೆ, ಇಲ್ಲಿ ಈ ನಿಯಮ ಉ್ಲಲಂಘಿಸಲಾಗಿದೆ ಎಂದು ಇಳಂತಿಲ ಗ್ರಾಮ ಪಂಚಾಯಿತಿ ಸದಸ್ಯ ಯೂಸುಫ್ ಪೆದಮಲೆ ಹೇಳಿದರು.
ಗುತ್ತಿಗೆದಾರರಿಂದ ಮತ್ತೆ ಸರಿಪಡಿಸುತ್ತೇನೆ-ಬಕ್ಕಪ್ಪ ಹೊಸಮನಿ: ಕಾಮಗಾರಿಯನ್ನು ಪರಿಶೀಲನೆ ನಡೆಸುತ್ತೇನೆ. ಬಿಡುಗಡೆ ಆಗಿರುವ ಅನುದಾನಕ್ಕೆ ಸರಿಯಾಗಿ ಕಾಮಗಾರಿ ಮಾಡದೆ ಇದ್ದರೆ, ಅವರಿಂದ ಮತ್ತೆ ಅವುಗಳನ್ನು ಸರಿ ಮಾಡಿಸುವೆ. ಉಳಿಸಿಕೊಂಡಿರುವ
ಗುಂಡಿಗಳನ್ನು ಮುಚ್ಚಿಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಕ್ಕಪ್ಪ ಹೊಸಮನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.