ಉಪ್ಪಿನಂಗಡಿ: ಭಾರತೀಯರು ಜಗತ್ತಿಗೆ ನೀಡಿರುವುದೆಲ್ಲವೂ ಶ್ರೇಷ್ಠವಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ತಾಂತ್ರಿಕತೆ ಮತ್ತು ವೈಜ್ಞಾನಿಕತೆಯ ಬಳಕೆಯೊಂದಿಗೆ ಹೊಸತನದ ಯುದ್ಧ ಶೈಲಿಯನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಭಾರತದ ಸಾಮರ್ಥ್ಯವನ್ನು ವಿಶ್ವವೇ ಬೆರಗು ಕಣ್ಣುಗಳಿಂದ ನೋಡುವಂತಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘವು 85 ಸಂಸ್ಥೆಗಳೊಂದಿಗೆ ಮುನ್ನಡೆಯುತ್ತಿದೆ. ಜಗತ್ತಿಗೆ ಜ್ಞಾನದ ಬೆಳಕು ನೀಡಿದ, ಬದುಕಿನ ಸೌಂದರ್ಯವನ್ನು ತಿಳಿಸಿದ ನಮ್ಮ ಶ್ರೇಷ್ಠ ಪರಂಪರೆಯ ಹಿನ್ನೆಲೆ ನಮ್ಮದೆಂಬ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಘ ಕರೆ ನೀಡಿದ್ದ ಪಂಚ ಪರಿವರ್ತನೆಗಳಾದ ಸಾಮಾಜಿಕ ಸಾಮರಸ್ಯ, ಪರ್ಯಾವರಣ ಸಂರಕ್ಷಣೆ, ಸ್ವದೇಶಿ ಭಾವ ಜಾಗರಣ, ಕುಟುಂಬ ಪ್ರಬೋಧನ, ನಾಗರಿಕ ಕರ್ತವ್ಯಗಳ ಕುರಿತು ಕ್ರಿಯಾಶೀಲರಾಗಬೇಕು ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಶ್ರೀರಾಮ್ ಕೈಲಾರ್ ಮಾತನಾಡಿ, ನಾವು ಜಗತ್ತಿನ ಎಲ್ಲೇ ಹೋದರೂ ನಮ್ಮ ಜನ್ಮ ಭೂಮಿಯ ಉನ್ನತಿಗಾಗಿ ಸಮರ್ಪಿಸುವ ಭಾವ ಹೊಂದಿರಬೇಕು ಎಂದರು.
ಸಾಧಕರಿಗೆ ಸನ್ಮಾನ: ಕಲಿಕಾ ಅವಧಿಯಲ್ಲಿ ಸಾಧನೆ ತೋರಿದ ಪ್ರಾಪ್ತಿ ಪಿ.ವಿ. ಅವರಿಗೆ ಇಂದ್ರಧನುಷ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಸಮಿತಿಯ ಕರುಣಾಕರ ಸುವರ್ಣ, ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ಎಚ್.ಕೆ.ಪ್ರಕಾಶ್ ಸ್ವಾಗತಿಸಿ, ಕಾಲೇಜು ವಿದ್ಯಾರ್ಥಿ ನಾಯಕ ಪ್ರಾಂಜಲ್ ನಾಯಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.