
ಮಂಗಳೂರು: ‘ ಉರ್ದು ಭಾರತದಲ್ಲೇ ಹುಟ್ಟಿ, ಬೆಳೆದು, ಶಿಖರಕ್ಕೇರಿದ ಭಾಷೆ. ಭಾರತೀಯರೆಲ್ಲರಿಗೆ ಸೇರಿದ ಈ ಭಾಷೆಯನ್ನು ಒಂದು ಧರ್ಮದ ಜತೆ ಜೋಡಿಸುವುದು ದುರಂತ’ ಎಂದು ಮಂಗಳೂರು ಡಯೆಟ್‌ನ ಹಿರಿಯ ಪ್ರಾಧ್ಯಾಪಕಿ ಫಾತಿಮಾಬಿ ಟಿ.ಐ. ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅಂಜುಮನ್ ತರಖಿ-ಎ- ಉರ್ದು ಮತ್ತು ಅರೇಬಿಕ್ ಸಂಸ್ಥೆ ಬೋಳಾರದಲ್ಲಿ ಆಯೋಜಿಸಿದ್ದ ಉರ್ದು ಚರ್ಚಾ ಚಾಂಪಿಯನ್‌ಶಿಪ್ ಟ್ರೋಫಿ- 2025ರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.
‘ದೇಶದ ಮಣ್ಣಿನದೇ ಆದ ಉರ್ದು ಭಾಷೆಗೆ ಸಿಹಿತನ, ತಾಜಾತನ, ಸಂಸ್ಕೃತಿ, ಸಂಸ್ಕಾರದ ಸಮ್ಮಿಲನ ಹಾಗೂ ಹೃದಯವನ್ನು ತಟ್ಟುವ ಶಕ್ತಿ ಇದೆ. ಧಾರ್ಮಿಕ ವಿದ್ವಾಂಸರು, ಕವಿಗಳು, ಸಾಹಿತಿಗಳು ಉರ್ದುವನ್ನು ಬೆಳೆಸಿದ್ದಾರೆ. ಅದು ಗಂಗೆ- ಯಮುನೆಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಉರ್ದು ಭಾಷಿಕರು ಇದರ ಬಗ್ಗೆ ಹೆಮ್ಮೆಪಡಬೇಕು’ ಎಂದರು.
‘ಕಲಿಕೆಗೆ ತಾಯಿ ನುಡಿಯೇ ಒಳ್ಳೆಯದು ನಿಯಮ. ಮಕ್ಕಳಿಗೆ ಪೋಷಕರು ಉರ್ದು ಕಲಿಸಬೇಕು. ಮಕ್ಕಳು ಸ್ವರ್ಗದ ಹೂಗಳಂತೆ. ಆ ಹೂಗಳು ಬಾಡದಂತೆ, ಅವರ ವ್ಯಕ್ತಿತ್ವ ರೂಪಿಸಿ ಅರಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದು’ ಎಂದು ಅವರು ಹೇಳಿದರು.
ಶಿವಮೊಗ್ಗ ಡಿಡಿಪಿಐ ಕಚೇರಿಯ ಸಿಇಒ ಝಾಕಿರ್, ‘ರಾಜ್ಯದಲ್ಲಿ ಕನ್ನಡದ ಜತೆ ತಮಿಳು, ತೆಲುಗು ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಬಹುಭಾಷೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಶಾಲೆಗಳಲ್ಲಿ ಮಾತ್ರ ಉರ್ದು ಉಳಿದಿದೆ. ಅರೇಬಿಕ್ ಓದುವ ಮಕ್ಕಳು ಉರ್ದು ಓದಬಲ್ಲರು. ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿವರೆಗೆ ಉರ್ದು ಕಲಿಸಲು ಅನುಮತಿ ಅಗತ್ಯವಿಲ್ಲ. ಇಂಗ್ಲಿಷ್, ಕನ್ನಡ ಅಥವಾ ಉರ್ದು ಆಯ್ಕೆಗೆ ಅವಕಾಶವಿದೆ. ಸ್ಯಾಟ್ಸ್ನಲ್ಲಿ ನೋಂದಾಯಿಸಿದರೆ ಸರ್ಕಾರ ಉಚಿತವಾಗಿ ಪುಸ್ತಕ ಪೂರೈಸುತ್ತದೆ’ ಎಂದರು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸಲಾಮ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಶಾದಿ ಮಹಲ್ ಉಪಾಧ್ಯಕ್ಷ ಎಸ್.ಎ.ಖಲೀಲ್ ಭಾಗವಹಿಸಿದ್ದರು. ಶಿಕ್ಷಕರಾದ ಮೊಹಮ್ಮದ್ ಸಲೀಂ ಮತ್ತು ಮೊಹಮ್ಮದ್ ಝಿಯಾವುಲ್ಲಾ ತೀರ್ಪುಗಾರರಾಗಿದ್ದರು.
ಸಂಸ್ಥೆಯ ಸದಸ್ಯರಾದ ಆಬಿದ್ ಅಸ್ಗರ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಸ್ಟರ್ ಮೊಹಮ್ಮದ್ ಹನೀಫ್ ಪ್ರಾಸ್ತಾವಿಕ ಮಾತನಾಡಿದರು. ಇಕ್ರಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.