ADVERTISEMENT

ಕೆಲಸ ಸಮಾನ; ಸೌಲಭ್ಯ ಅಸಮಾನ: ಎಎಸ್‌ಐ, ಪಿಎಸ್‌ಐಗಳ ಅಳಲು

ಪತ್ರಾಂಕಿತ ರಜೆ ಸಂಬಳದಲ್ಲಿ ತಾರತಮ್ಯ: ಎಎಸ್‌ಐ, ಪಿಎಸ್‌ಐಗಳ ಅಳಲು

ಸಂಧ್ಯಾ ಹೆಗಡೆ
Published 22 ಅಕ್ಟೋಬರ್ 2025, 5:11 IST
Last Updated 22 ಅಕ್ಟೋಬರ್ 2025, 5:11 IST
ಸುಧೀರ್ ಕುಮಾರ್ ರೆಡ್ಡಿ
ಸುಧೀರ್ ಕುಮಾರ್ ರೆಡ್ಡಿ   

ಮಂಗಳೂರು: ಸರ್ಕಾರಿ ರಜಾದಿನಗಳಲ್ಲೂ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಪತ್ರಾಂಕಿತ ರಜೆ ಬದಲಾಗಿ ಸರ್ಕಾರ, ರಜಾ ಸಂಬಳವನ್ನು ನೀಡುತ್ತದೆ. ಆದರೆ, ಈ ಸಂಬಳ ನೀಡುವಲ್ಲಿ ತಾರತಮ್ಯವಾಗುತ್ತಿದೆ ಎಂಬುದು ಹಲವು ಎಎಸ್‌ಐ, ಪಿಎಸ್‌ಐಗಳ ಅಳಲು.‌‌

ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ಪೊಲೀಸರನ್ನು ಶಾಂತಿ, ಸುವ್ಯವಸ್ಥೆ ಕಾಪಾಡಲು ವಿಶೇಷ ಬಂದೋಬಸ್‌ಗೆ ನಿಯೋಜಿಸಲಾಗುತ್ತದೆ. ಸಾರ್ವತ್ರಿಕ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾನ್‌ಸ್ಟೆಬಲ್‌ ಹುದ್ದೆಯಿಂದ ಸಬ್ ಇನ್‌ಸ್ಪೆಕ್ಟರ್ ದರ್ಜೆವರೆಗಿನ ಅಧಿಕಾರಿ, ಸಿಬ್ಬಂದಿಗೆ ಪತ್ರಾಂಕಿತ ರಜೆಗಳ ಬದಲಾಗಿ, ಒಂದು ತಿಂಗಳ ಸಂಬಳಕ್ಕೆ ಸಮಾನವಾದ ಮೊತ್ತವನ್ನು ಸರ್ಕಾರ ನೀಡುತ್ತದೆ. ಆದರೆ, ಈ ರೀತಿ ವೇತನ ನೀಡುವಾಗ ಪೊಲೀಸ್ ಕಾನ್‌ಸ್ಟೆಬಲ್‌, ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಒಂದು ರೀತಿ ಇದ್ದರೆ, ಎಎಸ್‌ಐ ಮತ್ತು ಪಿಎಸ್‌ಐಗಳಿಗೆ ಒಂದು ರೀತಿ ಇದೆ ಎಂಬುದು ಸೌಲಭ್ಯ ವಂಚಿತರ ಆರೋಪ.

‘ಪೊಲೀಸ್ ಕಾನ್‌ಸ್ಟೆಬಲ್‌, ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಅವರು ಪಡೆಯುವ ಸಂಬಳಕ್ಕೆ ಸಮಾನವಾಗಿ 30 ದಿನಗಳ ಹೆಚ್ಚುವರಿ ವೇತನವನ್ನು, ಜೂನ್‌ ತಿಂಗಳಿನಲ್ಲಿ ಪಡೆಯುವ ಸಂಬಳಕ್ಕೆ ಅನುಗುಣವಾಗಿ ಮೂಲವೇತನ, ಡಿಎ ಮತ್ತು ಎಚ್‌ಆರ್‌ಎ ಆಧರಿಸಿ ಮುಂದಿನ ವರ್ಷದ ಜನವರಿಯಲ್ಲಿ ನೀಡಲಾಗುತ್ತದೆ. ಆದರೆ, ಎಎಸ್‌ಐ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಕೇವಲ 15 ದಿನಗಳ ಸಂಬಳವನ್ನು ಮಾತ್ರ ಸರ್ಕಾರ ನೀಡುತ್ತದೆ. ಬಂದೋಬಸ್ತ್‌ ಸೇರಿದಂತೆ ಎಲ್ಲ ರೀತಿಯ ಕರ್ತವ್ಯಗಳನ್ನು ನಾವು ಸಮಾನವಾಗಿ ನಿರ್ವಹಿಸುತ್ತೇವೆ. ಆದರೆ, ಪತ್ರಾಂಕಿತ ರಜಾ ಸಂಬಳದಲ್ಲಿ ಮಾತ್ರ ನಮಗೆ ಭೇದಭಾವ ಯಾಕೆ’ ಎಂದು ಪ್ರಶ್ನಿಸುತ್ತಾರೆ ಎಎಸ್‌ಐ ಒಬ್ಬರು.

ADVERTISEMENT

ಎಎಸ್‌ಐ, ಪಿಎಸ್‌ಐ ಜೊತೆಗೆ ತತ್ಸಮಾನ ಹುದ್ದೆಯಲ್ಲಿರುವ ಸಿವಿಲ್, ಸಶಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ, ಕೆಎಸ್‌ಐಎಫ್ ಇನ್ನಿತರ ವಿಭಾಗಗಳ ರಾಜ್ಯದ ಸುಮಾರು 12,900ಕ್ಕೂ ಹೆಚ್ಚು ಸಿಬ್ಬಂದಿಗೆ ಈ ರೀತಿ ಅನ್ಯಾಯವಾಗುತ್ತಿದೆ. 1988ರಲ್ಲಿ ಆಗಿರುವ ಆದೇಶದಲ್ಲಿ ಮಾರ್ಪಾಡು ಮಾಡಿ, ಪತ್ರಾಂಕಿತ ರಜಾ ಸಂಬಳದಲ್ಲಿ ಸಮಾನತೆ ತರಬೇಕು ಎಂಬ ಬಗ್ಗೆ ಹಲವಾರು ಬಾರಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ವಿನಂತಿಸಲಾಗಿದೆ ಎಂದು ಸಬ್ ಇನ್‌ಸ್ಪೆಕ್ಟರ್ ಒಬ್ಬರು ಹೇಳುತ್ತಾರೆ. 

‘ಹಾರ್ಡ್‌ಷಿಪ್ ಭತ್ಯೆ ಕೂಡ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ಗಳಿಗೆ ₹3,000 ಇದ್ದರೆ, ಪದೋನ್ನತಿ ಪಡೆದು ಎಎಸ್‌ಐ, ಪಿಎಸ್‌ಐ ಆದವರಿಗೆ ₹2,000ಕ್ಕೆ ಇಳಿಕೆ ಮಾಡಲಾಗುತ್ತದೆ. ಇಲ್ಲಿಯೂ ನಮಗೆ ತಾರತಮ್ಯವಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

ಪೊಲೀಸರ ಪತ್ರಾಂಕಿತ ರಜೆಗೆ ಸಂಬಂಧಿಸಿ ಸರ್ಕಾರದ ಆದೇಶ ಇದೆ. ಈ ಆದೇಶ ಪ್ರಕಾರವೇ ರಜಾ ಸಂಬಳ ನೀಡಲಾಗುತ್ತದೆ.
ಸುಧೀರ್‌ಕುಮಾರ್ ರೆಡ್ಡಿ ಮಂಗಳೂರು ನಗರ ಪೊಲೀಸ್ ಕಮಿಷನರ್

ಗೃಹ ಸಚಿವರಿಗೆ ಪತ್ರ ಬರೆದ ಖಾದರ್‌

ಈ ಸಂಬಂಧ ಇತ್ತೀಚೆಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮಂಗಳೂರಿನ ಪೊಲೀಸ್ ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ. ಪತ್ರಾಂಕಿತ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಅ‌ಗ್ನಿಶಾಮಕ ಅಧಿಕಾರಿ ಸಿಬ್ಬಂದಿಗೆ 30 ದಿನಗಳ ವೇತನ ದೊರೆಯುತ್ತದೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲೂ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲರಿಗೂ 30 ದಿನಗಳ ವೇತನ ನೀಡಲು ಕ್ರಮವಹಿಸಬೇಕು ಎಂದು ಖಾದರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.