ADVERTISEMENT

ಮಂಗಳೂರಿನಲ್ಲಿ ಕೆಎಸ್‌ಎಫ್‌ಸಿ ಪ್ರಾದೇಶಿಕ ಕಚೇರಿ ಆರಂಭಿಸಿ- ಕೆಸಿಸಿಐ ಮನವಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 6:04 IST
Last Updated 9 ಮಾರ್ಚ್ 2022, 6:04 IST
ಶಶಿಧರ್‌ ಪೈ ಮಾರೂರು
ಶಶಿಧರ್‌ ಪೈ ಮಾರೂರು   

ಮಂಗಳೂರು: ಕರ್ನಾಟಕ ಹಣಕಾಸು ನಿಗಮ(ಕೆಎಸ್‌ಎಫ್‌ಸಿ)ದ ಪ್ರಾದೇಶಿಕ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.

ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೀರ್ಘಾವಧಿ ಮತ್ತು ಮಧ್ಯಮಾವಧಿಸಾಲ ವಿತರಿಸುವ ಉದ್ದೇಶದಿಂದ ಕೆಎಸ್‌ಎಫ್‌ಸಿ ಆರಂಭಿಸಲಾಗಿದೆ. ಕೈಗಾರಿಕಾ ಚಟುವಟಿಕೆಯನ್ನು ಉತ್ತೇಜಿಸುವುದೇ ಸಂಸ್ಥೆಯ ಉದ್ದೇಶವಾಗಿದ್ದು, ಈ ಸಂಸ್ಥೆಯ ಪ್ರಾದೇಶಿಕ ಕಚೇರಿ ಮಂಗಳೂರಿಗೆ ಅಗತ್ಯವಾಗಿದೆ ಎಂದು ಕೆಸಿಸಿಐ ಅಧ್ಯಕ್ಷ ಶಶಿಧರ್‌ ಪೈ ಮಾರೂರು ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 17,883 ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿದ್ದು, ಕೆಎಸ್‌ಎಫ್‌ಸಿಯ ಪ್ರಾದೇಶಿಕ ಕಚೇರಿಯನ್ನು ನಗರದಲ್ಲಿ ಸ್ಥಾಪಿಸುವುದರಿಂದ ಈ ಭಾಗದ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ. ಇಲ್ಲದೇ ಇದ್ದರೆ, ಇಲ್ಲಿನ ಉದ್ಯಮಿಗಳು ಹಾಸನಕ್ಕೆ ಹೋಗುವ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.

ADVERTISEMENT

ಲಘು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಹಿತದೃಷ್ಟಿಯಿಂದ ಈ ಮನವಿಗೆ ಸ್ಪಂದಿಸಿ, ಆದಷ್ಟು ಶೀಘ್ರ ಕೆಎಸ್‌ಎಫ್‌ಸಿ ಪ್ರಾದೇಶಿಕ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.