ADVERTISEMENT

ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ: ಖಾದರ್ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 8:25 IST
Last Updated 17 ಮೇ 2022, 8:25 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ಶಾಲೆಗಳಲ್ಲಿ ಪಠ್ಯಪುಸ್ತಕ,‌ ಪೆನ್ನು ಕೊಟ್ಟು ಸತ್ಪ್ರಜೆಗಳನ್ನಾಗಿ ರೂಪಿಸುವ‌ ಮಕ್ಕಳ ಕೈಗಳಿಗೆ, ಶಾಸಕರೇ ಮುಂದೆ ನಿಂತು ರೈಫಲ್ ತರಬೇತಿ ನೀಡುವುದು, ಆಯುಧವನ್ನು ಕೊಡುವುದು ಸರ್ಕಾರದ ತಾಲಿಬಾನ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಟೀಕಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯ ಸರ್ಕಾರ ಗೂಂಡಾಗಿರಿಯನ್ನು ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿದೆ. ಗೃಹ ಸಚಿವರು, ಶಿಕ್ಷಣ ಸಚಿವರು ರಾಜ್ಯದ ಜನರಿಗೆ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು' ಎಂದು ಆಗ್ರಹಿಸಿದರು.

ಎನ್ ಸಿಸಿಯಂತಹ ಸಂಸ್ಥೆಗಳು ಇಂತಹ ತರಬೇತಿ ನೀಡುತ್ತವೆ ಎಂದು ಕೆಲವರು ಹೇಳುತ್ತಾರೆ. ಇಂತಹ ಸಂಸ್ಥೆಗಳಿಗೆ ಸರ್ಕಾರದ ಮಾನ್ಯತೆ ಇರುತ್ತದೆ. ಆದರೆ, ಕೊಡಗಿನ ಶಾಲೆಯಲ್ಲಿ ತರಬೇತಿ ಆಯೋಜಿಸಿದವರು ಯಾರು ? ಯಾರು ಬೇಕಾದರೂ ಈ ರೀತಿ ತರಬೇತಿ ನಡೆಸಬಹುದೇ ? ತರಬೇತಿ ನೀಡಿರುವ ಸಂಘಟನೆಯ ಉದ್ದೇಶ ಏನು ? ಈ ತರಬೇತಿ ಆಯೋಜಿಸುವ ಮುನ್ನ ಸ್ಥಳೀಯ ಜಿಲ್ಲಾಧಿಕಾರಿ, ಪೊಲೀಸರಿಂದ ಅನುಮತಿ ಪಡೆಯಲಾಗಿದೆಯೇ ? ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಿ, ಸರ್ಕಾರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮುಖ್ಯಮಂತ್ರಿ, ಗೃಹ ಸಚಿವರು, ಶಿಕ್ಷಣ ಸಚಿವರು ಮೌನವಾಗಿದ್ದರೆ ಪರೋಕ್ಷವಾಗಿ ಇದನ್ನು ಬೆಂಬಲಿಸಿದಂತಾಗುತ್ತದೆ ಎಂದರು.

ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗುತ್ತದೆ ಎಂದಾದರೆ ಆಯ್ದ ಮಕ್ಕಳಿಗೆ ಮಾತ್ರ ಯಾಕೆ ನೀಡಬೇಕು. ಶಾಲೆಗೆ ಹೋಗುವ ಎಲ್ಲ ಮಕ್ಕಳಿಗೂ ತರಬೇತಿ ನೀಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.