
ಮಂಗಳೂರು: ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವಸತಿ, ಸಮುಚ್ಚಯ, ವಸತಿ ಬಡಾವಣೆಗಳನ್ನು ಹೊಂದಿರುವ ಫಳ್ನೀರ್ ವಾರ್ಡ್‌ನಲ್ಲಿ ವಾಹನ ಪಾರ್ಕಿಂಗ್ ಕಿರಿಕಿರಿ, ಹೆಚ್ಚುತ್ತಿರುವ ಬ್ಲ್ಯಾಕ್ ಸ್ಪಾಟ್‌ಗಳು ನಿವಾಸಿಗಳನ್ನು ಕಾಡುತ್ತಿವೆ.
ಹೈಲ್ಯಾಂಡ್, ಫಳ್ನೀರ್ ರಸ್ತೆಯ ಎರಡೂ ಬದಿಗಳಲ್ಲಿ ದಿನವಿಡೀ ವಾಹನಗಳು ಸಾಲಾಗಿ ನಿಂತಿರುತ್ತವೆ. ಇಲ್ಲಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ, ರೋಗಿಗಳನ್ನು ಕರೆತರುವ ವಾಹನಗಳೇ ಹೆಚ್ಚಿರುತ್ತವೆ. ಸ್ಥಳೀಯ ನಿವಾಸಿಗಳ ವಾಹನ ನಿಲುಗಡೆಗೆ ಜಾಗವೇ ಇರುವುದಿಲ್ಲ. ರಸ್ತೆ ಬದಿ ವಾಹನಗಳ ನಿಲುಗಡೆಯಿಂದ ವಾಹನ ದಟ್ಟಣೆ ಉಂಟಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಪಾಲಿಕೆಯ ವಾಹನ ಪ್ರತಿದಿನ ಕಸ ಕೊಂಡೊಯ್ಯಲು ಬರುತ್ತದೆ. ಆದರೆ, ಕೆಲವರು ಅಕ್ರಮವಾಗಿ ರಸ್ತೆ ಬದಿಯಲ್ಲಿ ಕಸ ತಂದು ಎಸೆಯುತ್ತಾರೆ. ಕೆಲವು ನಿರ್ದಿಷ್ಟ ಸ್ಥಳಗಳು ಕಸ ರಾಶಿ ಹಾಕುವ ಜಾಗಗಳಾಗಿ ಮಾರ್ಪಟ್ಟಿವೆ. ಅಕ್ರಮವಾಗಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಪಾಲಿಕೆ ದಂಡ ವಿಧಿಸಬೇಕು. ಆಗ ಮಾತ್ರ ಇದನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ಸ್ಥಳೀಯ ಅಂಗಡಿಯವರೊಬ್ಬರು ಆಕ್ರೋಶದಿಂದ ಹೇಳಿದರು.
ಗೋರಿಗುಡ್ಡಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ಮುಖ್ಯ ರಸ್ತೆಯಲ್ಲಿ ವೆಲೆನ್ಸಿಯಾ ಚರ್ಚ್, ಕ್ರಿಶ್ಚಿಯನ್ನರ ಸ್ಮಶಾನ (ಸಿಮೆಟ್ರಿ) ಇದೆ. ಕಿಟೆಲ್ ಮೆಮೊರಿಯಲ್ ಶಾಲೆಗೆ ಹೋಗುವ ಮಕ್ಕಳು ಇದೇ ರಸ್ತೆಯಲ್ಲಿ ಹೋಗುತ್ತಾರೆ. ಡಾಂಬರ್ ಕಿತ್ತು ಹೋಗಿ, ಹೊಂಡ ಬಿದ್ದಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ.
ಕ್ರಿಶ್ಚಿಯನ್ ಸಿಮೆಟ್ರಿ ಕಾಂಪೌಂಡ್‌ನ ಗೋಡೆಗೆ ಎಚ್ಚರಿಕೆಯ ಫಲಕವೊಂದಕ್ಕೆ ಅಂಟಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದರೆ ದಂಡ ವಿಧಿಸಲಾಗುವುದು ಎಂದು ಫಲಕದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ಫಲಕದ ಕೆಳಭಾಗದಲ್ಲೇ ಕಸ ತುಂಬಿದ ಪ್ಲಾಸ್ಟಿಕ್ ಕೊಟ್ಟೆಗಳು ರಾಶಿ ಬಿದ್ದಿವೆ. ಈ ಕಾಂಪೌಂಡ್ ಗೋಡೆಯು ಮೂತ್ರಾಲಯದಂತಾಗಿದೆ. ರಸ್ತೆಯಲ್ಲಿ ಮೂಗುಮುಚ್ಚಿ ಓಡಾಡಬೇಕು ಎಂದು ಅಲ್ಲಿಯೇ ರಿಕ್ಷಾ ನಿಲ್ಲಿಸಿಕೊಂಡಿದ್ದ ಕೇಶವ್ ಬೇಸರಿಸಿದರು.
ಮಂಗಳಾ ರಸ್ತೆ ಪ್ರತಿವರ್ಷ ಹಾಳುಗುತ್ತದೆ. ಇದನ್ನು ಕಾಂಕ್ರಿಟೀಕರಣಗೊಳಿಸಬೇಕು. ಪದೇ ಪದೇ ರಸ್ತೆ ಅಗೆಯುವುದನ್ನು ನಿಲ್ಲಿಸಬೇಕು. ಫಾದರ್ ಮುಲ್ಲರ್ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಆಂಬುಲೆನ್ಸ್‌ಗಳ ನಿಲುಗಡೆಯಿಂದ ವಾಹನ ಸಂಚಾರಕ್ಕೆ ಕಷ್ಟವಾಗುತ್ತದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರೊಬ್ಬರು ಆಗ್ರಹಿಸಿದರು.
ಫಳ್ನೀರ್ ವಾರ್ಡ್‌ನಲ್ಲಿ ಬಸ್ ತಂಗುದಾಣಗಳ ಕೊರತೆ ಇದ್ದು, ಬಸ್ ಕಾಯುವವರಿಗೆ ಸಮಸ್ಯೆಯಾಗುತ್ತದೆ. ಕೆನರಾ ಬ್ಯಾಂಕ್ ಸಮೀಪ, ರೋಶನಿ ನಿಲಯದ ಎದುರು ಸೇರಿದಂತೆ ಅಗತ್ಯ ಇರುವ ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು ಎಂದು ಮಿಲಾಗ್ರಿಸ್ ಮತ್ತು ಫಳ್ನೀರ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಧರ್ಮಣ ನಾಯ್ಕ ಹೇಳುತ್ತಾರೆ.
ಪೊಲೀಸ್ ಇಲಾಖೆ ಸಭೆ ನಡೆಸಲಿ
ಹೈಲ್ಯಾಂಡ್ ಫಳ್ನೀರ್ ರಸ್ತೆಯಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ 100ಕ್ಕೂ ಹೆಚ್ಚು ಕ್ಲಿನಿಕ್‌ಗಳಿವೆ ದೊಡ್ಡ ಆಸ್ಪತ್ರೆಗಳು ಇವೆ. ಕೇರಳ ಭಾಗದಿಂದ ಬಹುಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ರೋಗಿಗಳನ್ನು ಕರೆತರುವ ವಾಹನ ರಸ್ತೆ ಬದಿಗೆ ನಿಲ್ಲುತ್ತದೆ. ಇಲ್ಲಿನ ನಿವಾಸಿಗಳಿಗೆ ಇದು ನಿತ್ಯ ನಿರಂತರ ಸಮಸ್ಯೆ. ಸಂಚಾರ ವಿಭಾಗದ ಎಸಿಪಿ ನೇತೃತ್ವದಲ್ಲಿ ಎಲ್ಲ ಆಸ್ಪತ್ರೆ ಕ್ಲಿನಿಕ್ ಮುಖ್ಯಸ್ಥರ ಸಭೆ ನಡೆಸಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ಫಳ್ನೀರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.